ನವದೆಹಲಿ : ದೇಶದ ಜನರಿಗೆ ಕೋವಿಡ್ ಲಸಿಕೆ ಹಾಕುವಲ್ಲಿ ಭಾರತ ಅದ್ಭುತ ಯಶಸ್ಸು ಸಾಧಿಸಿದೆ. ತಂತ್ರಜ್ಞಾನ ವ್ಯಾಕ್ಸಿನೇಷನ್ ಪ್ರಕ್ರಿಯೆಯ ಬೆನ್ನೆಲುಬು ಎಂದಿರುವ ನಮೋ, ನಾನು ಟೀಕೆಗಳನ್ನ ಗೌರವಿಸುತ್ತೇನೆ. ಆದರೆ, ಈಗಿನ ಟೀಕೆ, ವಿಮರ್ಶೆಗಳು ತುಂಬಾ ಕೀಳಮಟ್ಟದಲ್ಲಿರುತ್ತವೆ ಎಂದು ಹೇಳಿದ್ದಾರೆ.
ನಿಯತಕಾಲಿಕೆವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನರೇಂದ್ರ ಮೋದಿ, ಬಲಿಷ್ಠ ರಾಷ್ಟ್ರ ಕಟ್ಟಲು ಸರ್ಕಾರ ನಡೆಸಬೇಕೇ ಹೊರತು ಮುಂದಿನ ಸರ್ಕಾರ ರಚನೆ ಮಾಡಲು ಅಲ್ಲ ಎಂದು ಪ್ರತಿಪಾದಿಸುವಾಗ ಟೀಕೆಗಳಿಗೆ ನಾನು ಹೆಚ್ಚಿನ ಗೌರವ ನೀಡುತ್ತೇನೆ ಎಂದಿದ್ದಾರೆ. ಆದರೆ, ಇಂದಿನ ಟೀಕೆಗಳು ಕೇವಲ ಕೀಳಮಟ್ಟದಿಂದ ಕೂಡಿರುತ್ತವೆ. ಅದರಲ್ಲಿ ರಾಜಕೀಯ ಮಾತ್ರ ಇರುತ್ತದೆ ಎಂದಿದ್ದಾರೆ.
ಪ್ರಾಮಾಣಿಕವಾಗಿ ನಾನು ಟೀಕೆಗಳಿಗೆ ಹೆಚ್ಚಿನ ಗೌರವ ನೀಡುತ್ತೇನೆ ಎಂದಿರುವ ಮೋದಿ, ಇತ್ತೀಚಿನ ದಿನಗಳಲ್ಲಿ ವಿಮರ್ಶೆ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದು ದುರದೃಷ್ಟವಶಾತ್. ಜನರು ಹೆಚ್ಚಾಗಿ ಆರೋಪ ಮಾಡುತ್ತಾರೆ.
ಟೀಕೆಗೆ ಕಠಿಣ ಪರಿಶ್ರಮ, ಸಂಶೋಧನೆ ಅಗತ್ಯವಿದೆ ಎಂದು ಹೇಳುವ ಮೂಲಕ ಟೀಕೆ ಹಾಗೂ ಆರೋಪಗಳ ನಡುವೆ ಗೆರೆ ಎಳೆದರು. ಟೀಕೆ ಮಾಡಲು ಜನರಿಗೆ ಸಮಯವಿಲ್ಲದಿರಬಹುದು. ಆದರೆ, ಕೆಲವೊಮ್ಮೆ ನಾವು ಉತ್ತಮ ವಿಮರ್ಶಕರನ್ನ ಕಳೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದೇ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದ ದೇಶದ ಪ್ರಧಾನಿಯಾಗುವವರೆಗೆ 20 ವರ್ಷಗಳ ಆಡಳಿತದಲ್ಲಿ ತೃಪ್ತಿದಾಯಕ ಕ್ಷಣದ ಬಗ್ಗೆ ಕೇಳಿದಾಗ ಅವರು 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಪ್ರದರ್ಶನದ ಉದಾಹರಣೆ ನೀಡಿದರು.
ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಕೂಡ ಸಾಕಷ್ಟು ಟೀಕೆ ವ್ಯಕ್ತವಾಗಿದ್ದವು. ಆದರೆ, ಇದೀಗ ಎಲ್ಲವೂ ಬದಲಾಗಿದೆ. ನಾವು ಕೊರೊನಾ ವ್ಯಾಕ್ಸಿನೇಷನ್ ಸಂಶೋಧನೆ ಮಾಡದಿದ್ದರೆ, ಇಂದಿನ ಪರಿಸ್ಥಿತಿ ಯಾವ ರೀತಿಯಾಗಿರುತ್ತಿತ್ತು ಎಂದು ಊಹಿಸಿಕೊಳ್ಳಿ ಎಂದರು.