ಮುಂಬೈ: ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಇಂದು ಮಾತುಕತೆ ನಡೆಸಿದರು. ರಾಜಕೀಯ ಸಂಘಟನೆ ಮತ್ತು ಸರ್ಕಾರದ ಉಳಿವಿನ ಸುತ್ತಲೂ ಏರ್ಪಟ್ಟಿರುವ ಕಾರ್ಯಕರ್ತರ ಆತಂಕ ನಿವಾರಿಸಲು ಅವರು ಪ್ರಯತ್ನಿಸಿದರು.
"ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನು ನಾನು ಖಾಲಿ ಮಾಡಿರಬಹುದು. ಆದರೆ, ದೃಢಸಂಕಲ್ಪ ಅಚಲವಾಗಿದೆ" ಎಂದು ಹೇಳುವ ಮೂಲಕ ಹೋರಾಟ ಮುಂದುವರೆಸುವ ಸುಳಿವು ಕೊಟ್ಟರು. "ಪಕ್ಷವು ಈ ಹಿಂದೆ ಎದುರಿಸಿದ ಬಂಡಾಯಗಳ ನಡುವೆಯೂ ಎರಡು ಬಾರಿ ಅಧಿಕಾರಕ್ಕೆ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಕೊರೊನಾ ಜೊತೆ ಹೋರಾಟ ನಡೆಯಿತು. ಆದರೆ ವಿರೋಧಿಗಳು ಈ ಪರಿಸ್ಥಿತಿಯ ಲಾಭ ಪಡೆದರು" ಎಂದು ಠಾಕ್ರೆ ದೂರಿದರು.
ತಮ್ಮದೇ ಪಕ್ಷದ ಮುಖಂಡ ಏಕನಾಥ್ ಶಿಂದೆ ಸರ್ಕಾರದಿಂದ ಬೇರ್ಪಟ್ಟು ಹಲವು ಶಾಸಕರ ಬೆಂಬಲದೊಂದಿಗೆ ಬಂಡಾಯದ ಗುಂಪು ರಚಿಸಿದ್ದು ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ. ಶಿಂದೆ ಪ್ರಸ್ತುತ ಅಸ್ಸೋಂ ಗುವಾಹಟಿಯಲ್ಲಿ ಕನಿಷ್ಠ 38 ಬಂಡಾಯ ಮತ್ತು 10 ಸ್ವತಂತ್ರ ಶಾಸಕರೊಂದಿಗೆ ಮೊಕ್ಕಾಂ ಹೂಡಿದ್ದಾರೆ. ತನ್ನ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಅವರು ಘೋಷಿಸಿದ್ದಾರೆ.