ಹೈದರಾಬಾದ್: ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಮೇಲೆ ಹೈದರಾಬಾದ್ ಪೊಲೀಸರ ಸೈಬರ್ ಕ್ರೈಂ ವಿಭಾಗದ ತಂಡವು ಮಂಗಳವಾರ ರಾತ್ರಿ ಕಾಂಗ್ರೆಸ್ ಪಕ್ಷದ ರಾಜಕೀಯ ತಂತ್ರಗಾರ ಸುನೀಲ್ ಕಣುಗೋಲು ಉರ್ಫ್ ಎಸ್‌ಕೆ ಅವರ ಹೈದರಾಬಾದಿನ ಮಾದಾಪುರದ ಕಚೇರಿ ಮೇಲೆ ದಾಳಿ ನಡೆಸಿದೆ.
ಕಣುಗೋಲು ಅವರ ಕಚೇರಿಯಿಂದ ರಾಜ್ಯದ ಬಿಆರ್ಎಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿದ ಆರೋಪದಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ಸೈಬರ್ ಕ್ರೈಮ್ಸ್) ಕೆವಿಎಂ ಪ್ರಸಾದ್ ನೇತೃತ್ವದ ತಂಡವು ಟಾಸ್ಕ್ ಫೋರ್ಸ್ ನ ಸಿಬ್ಬಂದಿಗಳೊಂದಿಗೆ ಮಾದಾಪುರದ ಇನಾರ್ಬಿಟ್ ಮಾಲ್ ಬಳಿ ಇರುವ ಕಣುಗೋಲು ಕಚೇರಿಯ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿತು.
ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಪೋಸ್ಟ್ ಹಾಕಿದ ಆರೋಪದಲ್ಲಿ ಸುನೀಲ್ ಕಣುಗೋಲು ವಿರುದ್ಧ ಸೈಬರ್ ಕ್ರೈಮ್ ವಿಭಾಗವು ಪ್ರಕರಣ ದಾಖಲಿಸಿದೆ. ಎಸ್‌ಕೆ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ವಿಷಯ ತಿಳಿದ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಮಹಮ್ಮದ್ ಅಲಿ ಶಬ್ಬೀರ್, ಅನಿಲ್‌ಕುಮಾರ್ ಸೇರಿದಂತೆ ಹಲವು ಮುಖಂಡರು ಕಣುಗೋಲು ಅವರ ಕಚೇರಿಗೆ ಧಾವಿಸಿ ಪೊಲೀಸ್ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದರು.
ಕಣುಗೋಲು ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದು ಅನಗತ್ಯ ಕ್ರಮವಾಗಿದೆ ಮತ್ತು ಪೊಲೀಸ್ ವ್ಯವಸ್ಥೆಯ ಸಂಪೂರ್ಣ ದುರುಪಯೋಗವಾಗಿದೆ. ಪೊಲೀಸ್ ಕಾರ್ಯಾಚರಣೆಯಿಂದ ಕಚೇರಿಯಲ್ಲಿ ಹಾಜರಿದ್ದ ಮಹಿಳೆಯರು ಭಯಭೀತರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಬ್ಬೀರ್ ಅಲಿ ಹೇಳಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಿರಿಯ ನಾಯಕರಾದ ಮಹಮ್ಮದ್ ಅಲಿ ಶಬ್ಬೀರ್, ಮಲ್ಲು ರವಿ, ಎಸ್. ಹರಿವರ್ದನ್ ರೆಡ್ಡಿ ಮತ್ತು ರೋಹಿನ್ ರೆಡ್ಡಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಮತ್ತು ಇವರೆಲ್ಲರ ನಿವಾಸದ ಹೊರಗೆ ಪೊಲೀಸ್ ಗಸ್ತು ಹಾಕಲಾಗಿದೆ.
ಇದನ್ನೂ ಓದಿ: ವೈಎಸ್ಆರ್ ತೆಲಂಗಾಣ ಅಧ್ಯಕ್ಷೆ ವೈಎಸ್ ಶರ್ಮಿಳಾ ಬಂಧನ: ಹೈದರಾಬಾದ್ಗೆ ಸ್ಥಳಾಂತರ