ಹೈದರಾಬಾದ್ (ತೆಲಂಗಾಣ): ಇತ್ತೀಚಿಗೆ ಕೊಕೇನ್ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧಿತರಾದ ತೆಲುಗಿನ 'ಕಬಾಲಿ' ಸಿನಿಮಾ ನಿರ್ಮಾಪಕ ಸುಂಕರ ಕೃಷ್ಣಪ್ರಸಾದ್ ಅಲಿಯಾಸ್ ಕೆಪಿ ಚೌಧರಿ ಕಾಲ್ ಲಿಸ್ಟ್‌ನಲ್ಲಿ ಹಲವು ಪ್ರಮುಖರ ಹೆಸರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೀಗಾಗಿ ಚೌಧರಿ ಬಂಧನವು ಸಿನಿಮಾ, ರಾಜಕೀಯ, ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ.
ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 13ರಂದು ನಿರ್ಮಾಪಕ ಚೌಧರಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿದ್ದರು. ಅಲ್ಲದೇ, 82.75 ಗ್ರಾಂ ತೂಕದ 90 ಸ್ಯಾಚೆಟ್‌ಗಳು, 2.05 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 78.50 ಲಕ್ಷ ರೂ. ವಸ್ತಗಳನ್ನು ವಶಕ್ಕೆ ಪಡೆದಿದ್ದರು.
ಗೂಗಲ್ ಡ್ರೈವ್‌ನಲ್ಲಿ ಖರೀದಿದಾರರ ಪಟ್ಟಿ: ನಿರ್ಮಾಪಕ ಚೌಧರಿ ಬಂಧನವು ಟಾಲಿವುಡ್ಅನ್ನು ಬೆಚ್ಚಿಬೀಳಿಸಿದೆ. ಈ ಡ್ರಗ್ಸ್ ಗ್ಯಾಂಗ್ ಹಿಂದೆ ಹಲವು ಸೆಲೆಬ್ರಿಟಿಗಳ ಹೆಸರು ಹೊರಬಿದ್ದಿದೆ. ಮಾದಕ ದ್ರವ್ಯ ಖರೀದಿಸುತ್ತಿದ್ದವರ ಪಟ್ಟಿಯನ್ನು ಪೊಲೀಸ್ ರಿಮಾಂಡ್ ವರದಿಯಲ್ಲಿ ಸೇರಿಸಲಾಗಿದೆ. ಗೂಗಲ್ ಡ್ರೈವ್‌ನಲ್ಲಿ ಕೊಕೇನ್ ಖರೀದಿಸಿದವರ ಪಟ್ಟಿ ಪತ್ತೆಯಾಗಿದೆ. ಸೆಲೆಬ್ರಿಟಿಗಳ ಫೋಟೋ ಸೇರಿದಂತೆ ಅವರ ವಿವರಗಳು ಬಹಿರಂಗವಾಗಿವೆ. ತೆಲಂಗಾಣ - ಆಂಧ್ರ ತೆಲುಗು ರಾಜ್ಯಗಳ 12 ಚಲನಚಿತ್ರ ಮತ್ತು ಟಿವಿ ನಟರು, ರೂಪದರ್ಶಿಗಳು ಮತ್ತು ಉದ್ಯಮಿಗಳ ಹೆಸರಿರುವುದು ಬಯಲಾಗಿದೆ.
ಇದರಲ್ಲಿ ಪ್ರಮುಖವಾಗಿ ಬೆಜವಾಡ ಭಾರತ್, ಚಿಂತಾ ಸಾಯಿ ಪ್ರಸನ್ನ, ಚಿಂತಾ ರಾಕೇಶ್ ರೋಷನ್, ನಲ್ಲ ರತನ್ ರೆಡ್ಡಿ, ಟ್ಯಾಗೋರ್ ವಿಜ್ ಅಲಿಯಾಸ್ ಟ್ಯಾಗೋರ್ ಪ್ರಸಾದ್ ಮೋಟೂರಿ, ತೇಜ ಚೌಧರಿ ಅಲಿಯಾಸ್ ರಘು ತೇಜ, ವಂಟೇರು ಸಾವನ್ ರೆಡ್ಡಿ, ಸನಾ ಮಿಶ್ರಾ, ಶ್ವೇತಾ, ಸುಶಾಂತ್, ನಿತಿನೇಶ್, ವಿ.ಅನುರೂಪ್ ಹೆಸರು ಕೇಳಿ ಬಂದಿದೆ. ಇವರೆಲ್ಲರೂ ಸಿಕ್ಕಿ ರೆಡ್ಡಿ ಅವರ ಸ್ನೇಹಿತಿಲ್ಸ್ ನಿವಾಸದಲ್ಲಿ ಸಂಭ್ರಮಾಚರಣೆ ವೇಳೆ ಕೊಕೇನ್ ಸೇವಿಸುತ್ತಿದ್ದರು ಎಂಬುದಕ್ಕೂ ಸಾಕ್ಷಿಗಳು ಲಭ್ಯವಾಗಿವೆ.
ಫೋನ್‌ಗಳಲ್ಲಿ ಸೆಲೆಬ್ರಿಟಿಗಳ ಫೋನ್ ನಂಬರ್ ಪತ್ತೆ: ಅಲ್ಲದೇ, ಇಬ್ಬರು ಸಿನಿಮಾ ನಿರ್ದೇಶಕರು, ಇಬ್ಬರು ನಟಿಯರು, ಕೆಲ ರಾಜಕೀಯ ವ್ಯಕ್ತಿಗಳ ಹೆಸರು ಸಹ ಕೇಳಿ ಬಂದಿದೆ. ಆದರೆ, ಅವರ ಬಗ್ಗೆ ಹೆಚ್ಚಿನ ವಿವರ ಬಹಿರಂಗವಾಗಿಲ್ಲ. ಜೊತೆಗೆ ಚೌಧರಿ ಬಳಿಯಿರುವ ನಾಲ್ಕು ಮೊಬೈಲ್ ಫೋನ್‌ಗಳಲ್ಲಿ ನೂರಾರು ಸೆಲೆಬ್ರಿಟಿಗಳ ಫೋನ್ ಸಂಖ್ಯೆಗಳಿವೆ. ನಾಲ್ಕೈದು ತಿಂಗಳಿಂದ ಸುಮಾರು 20 ದೂರವಾಣಿ ಕರೆಗಳು ಬಂದಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಅವರ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂ.ಗಳ ವಹಿವಾಟು ನಡೆಸಿರುವುದು ದೃಢಪಟ್ಟಿದೆ.
ಮೇ ತಿಂಗಳಲ್ಲಿ ಕೆಪಿ ಚೌಧರಿ ತಮ್ಮ ಸ್ನೇಹಿತ ಬೆಜವಾಡ ಭರತ್ ಅವರೊಂದಿಗೆ ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ವಾರಾಂತ್ಯದ ಪಾರ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಕೇನ್ ಖರೀದಿ ಮತ್ತು ಮಾರಾಟದ ಬಗ್ಗೆ ನಿರ್ಧರಿಸಿದ್ದರು. ನಂತರ ಚೌಧರಿ ಆಂಧ್ರದ ಭೀಮಾವರಂ ನಿವಾಸಿ ಸುರೇಶ್ ರಾಜು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಬಳಿಕ ಹನುಮಕೊಂಡದ ಅನುರೂಪ್ ಜೊತೆಯೂ ಅನೇಕ ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ಇದೇ ವೇಳೆ, ಪಂಜಗುಟ್ಟದಲ್ಲಿರುವ ಕ್ಯಾಬ್ಸ್ ಮಾಲೀಕ ರತನ್ ರೆಡ್ಡಿ ಮತ್ತು ಚಿತ್ರನಟಿ ಅಶು ರೆಡ್ಡಿ ಅವರೊಂದಿಗೆ ಅನೇಕ ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಡಾ.ಸುಧೀರ್, ಸಿನಿಮಾ ತಾರೆ ಜ್ಯೋತಿ, ಅಮೆರಿಕದಲ್ಲಿರುವ ಡಿ. ಅಮರ್ ಜೊತೆಯೂ ಮಾತುಕತೆ ನಡೆಸಿದ್ದರು. ಚೌಧರಿ ಗೋವಾದ ರೆಸ್ಟೋರೆಂಟ್ ಮ್ಯಾನೇಜರ್ ಮನೀಶ್ ಶಾ ಎಂಬುವವರ ಬ್ಯಾಂಕ್ ಖಾತೆಗೆ 85,000 ರೂ. ಹಾಕಿದ್ದಾರೆ. ಆಂಧ್ರದ ಮಂಗಳಗಿರಿಯ ಶೇಖ್ ಖಾಜಾ ಎಂಬುವರ ಬ್ಯಾಂಕ್ ಖಾತೆಯಲ್ಲಿ 2 ಲಕ್ಷ, ಬಿಹಾರದ ಕೌಶಿಕ್ ಅಗರ್ವಾಲ್ ಖಾತೆಯಲ್ಲಿ 2 ಲಕ್ಷ ರೂ. ವಹಿವಾಟು ನಡೆಸಿರುವ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗಿದೆ. ಆ ಬ್ಯಾಂಕ್ ಖಾತೆಗಳನ್ನು ಯಾರು ನಿರ್ವಹಿಸುತ್ತಿದ್ದರು ಮತ್ತು ಬೇರೆ ಹೆಸರಲ್ಲಿ ಡ್ರಗ್ ದಂಧೆಕೋರರು ಬಳಸುತ್ತಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಾದಕ ದ್ರವ್ಯ ಮಾರಾಟ ಯತ್ನ; ಹೈದರಾಬಾದ್‌ನಲ್ಲಿ ತೆಲುಗು ಚಿತ್ರ ನಿರ್ಮಾಪಕ ಅರೆಸ್ಟ್