ಹೈದರಾಬಾದ್ (ತೆಲಂಗಾಣ): ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಕಠಿಣ ಮತ್ತು ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಸುಮಾರು 240 ಕೆಜಿ ತೂಕದ ಬೊಜ್ಜಿನಿಂದ ಬಳಲುತ್ತಿದ್ದ ಯುವಕನಿಗೆ ಇಲ್ಲಿನ ಉಸ್ಮಾನಿಯಾ ಆಸ್ಪತ್ರೆಯ ವೈದ್ಯರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ (Bariatric surgery) ನೆರವೇರಿಸಿದರು. ಇದರಿಂದಾಗಿ ಈ ರೋಗಿಯ ತೂಕದಲ್ಲಿ ಸುಮಾರು 70 ಕೆಜಿಯಷ್ಟು ಕಡಿಮೆಯಾಗಿದೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಹೈದರಾಬಾದ್ನ ಗುಡಿಮಲ್ಕಾಪುರದ ಮಹೇಂದರ್ ಸಿಂಗ್(24) ಎಂಬವರು ಬಾಲ್ಯದಿಂದಲೂ ಬೊಜ್ಜಿನಿಂದ ಬಳಲುತ್ತಿದ್ದರು. ಎರಡು ತಿಂಗಳ ಹಿಂದೆ ಬೊಚ್ಚು ಕರಗಿಸುವ ಆಪರೇಷನ್ ಮಾಡಲಾಗಿತ್ತು. ಇದೀಗ ಯುವಕನ ತೂಕ 240ರಿಂದ 170 ಕೆಜಿಗೆ ಇಳಿದಿದೆ. ಸರ್ಕಾರಿ ವೈದ್ಯರ ಕಾರ್ಯಕ್ಕೆ ತೆಲಂಗಾಣ ಆರೋಗ್ಯ ಸಚಿವ ಹರೀಶ್ ರಾವ್ ಅಭಿನಂದನೆ ಸಲ್ಲಿಸಿದ್ದಾರೆ. ಮಹೇಂದ್ರ ಕುಟುಂಬಸ್ಥರು ಕೃತಜ್ಞತೆ ಅರ್ಪಿಸಿದ್ದಾರೆ.
'ಖಾಸಗಿ ಆಸ್ಪತ್ರೆಯಲ್ಲಿ ₹12 ಲಕ್ಷ ಶುಲ್ಕ ಕೇಳಿದ್ರು': ಮಹೇಂದರ್ ಸಿಂಗ್ಗೆ ಬಾಲ್ಯದಿಂದಲೂ ತೂಕ ಹೆಚ್ಚುತ್ತಲೇ ಇತ್ತು. ಇದರಿಂದ ನಡೆದಾಡಲು ಕಷ್ಟವಾಗುತ್ತಿತ್ತು. ಹೀಗಾಗಿಯೇ ಪೋಷಕರು ಆತನ ಆರೋಗ್ಯದ ದೃಷ್ಠಿಯಿಂದ ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಆಗ ವೈದ್ಯರು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಮತ್ತು ಇದಕ್ಕಾಗಿ ಸುಮಾರು 12 ಲಕ್ಷ ರೂಪಾಯಿ ಶುಲ್ಕವಾಗುತ್ತದೆ ಎಂದು ಹೇಳಿದ್ದರು.
ಆದರೆ, ಇಷ್ಟೊಂದು ಹಣ ಕಟ್ಟಿ ಆಪರೇಷನ್ ಮಾಡಿಸಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ಸರ್ಕಾರದ ಉಸ್ಮಾನಿಯಾ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿ ಮಾಡಿದ್ದಾರೆ. ಇಲ್ಲಿನ ವೈದ್ಯರು ಕೂಡ ಮಹೇಂದರ್ ತಪಾಸಣೆಗೆ ಒಳಪಡಿಸಿದ್ದರು. ನಂತರ ಸುಮಾರು 15 ವೈದ್ಯರು ಸಮಿತಿ ರಚಿಸಿ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದರು.
ಇದನ್ನೂ ಓದಿ: ದೇಶದ ಅತಿ ಕಿರಿಯ ಅಂಗಾಂಗ ದಾನಿ ಈಕೆ; ತಂದೆ ಪ್ರಾಣ ಉಳಿಸಲು ಕಾನೂನು ಸಮರದಲ್ಲಿ ಗೆದ್ದ ಬಾಲಕಿ
ಈ ಬಾರಿಯಾಟ್ರಿಕ್ ಸರ್ಜರಿ ಸಹಾಯದಿಂದ ಗ್ಯಾಸ್ಟ್ರಿಕ್ ಬೈಪಾಸ್ ಮೂಲಕ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡಲಾಗಿದೆ. ಜೊತೆಗೆ, ಅತಿಯಾದ ಆಹಾರ ಸೇವನೆ ತಡೆಯಲು ಆಹಾರ ಸ್ವೀಕರಿಸುವ ಸಣ್ಣ ಕರುಳನ್ನೂ ಸಹ ಸ್ವಲ್ಪ ಮಟ್ಟಿಗೆ ತಗ್ಗಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಮಾಹಿತಿ ನೀಡಿದ್ದು, ಯುವಕನಿಗೆ ಸ್ಟ್ರೋಎಂಟರಾಲಜಿ, ಎಂಡೋಕ್ರೈನಾಲಜಿ ಮತ್ತು ಅರಿವಳಿಕೆ ವಿಭಾಗ ತಜ್ಞರು ನಾಲ್ಕು ಗಂಟೆಗಳ ಕಾಲ ಶ್ರಮಿಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಹೇಳಿದರು.
ಸರ್ಜರಿಯ ನಂತರ ಒಂದು ವಾರ ಲಿಕ್ವಿಡ್ ಡಯಟ್ನಲ್ಲಿದ್ದರು. ಇದರ ಜೊತೆಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿತ್ತು. ಈ ಸಂದರ್ಭದಲ್ಲಿ ಆಹಾರ ಸೇವನೆ ಪ್ರಮಾಣ ಕಡಿಮೆಯಾದಂತೆ ಯುವಕನ ದೇಹದ ತೂಕವೂ ಕಡಿಮೆಯಾಗಿದೆ. ಈಗ ನಿಯಮಿತ ಡಯಟ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ದೇಹದ ತೂಕದಲ್ಲಿ 70 ಕೆಜಿ ಕಡಿಮೆಯಾಗಿದೆ. ಮುಂದೆ ಇನ್ನೂ 80ರಿಂದ 19ರಷ್ಟು ಕೆಜಿ ಕೂಡ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಮಹೇಂದರ್ ಮೊಣಕಾಲು ಮೇಲಿನ ದೇಹದ ತೂಕ ಅತಿಯಾಗಿತ್ತು. ಜೊತೆಗೆ ಬೊಜ್ಜು ಪ್ರೇರಿತ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆ ವೇಳೆ ಹಲವು ತೊಂದರೆಗಳು ಸಹ ಎದುರಾದವು. ದೇಹದ ತೂಕ 240 ಕೆಜಿಯಷ್ಟು ಇದ್ದರಿಂದ ಸರ್ಜರಿ ಸಮಯದಲ್ಲಿ ಒಂದೇ ಮೇಜಿನ ಮೇಲೆ ಮಲಗಿಸಲು ಕಷ್ಟವಾಗಿತ್ತು ಎಂದು ವಿವರಿಸಿದರು.
ವೈದ್ಯರ ತಂಡ: ಗ್ಯಾಸ್ಟ್ರೋಎಂಟರಾಲಜಿಯ ವಿಭಾಗದ ಪ್ರಾಧ್ಯಾಪಕ ಮತ್ತು ವೈದ್ಯ ಡಾ.ಮಧುಸೂಧನ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ.ಫಾನಿ, ಡಾ.ವಾಸಿಫಲಿ, ಡಾ.ಸುದರ್ಶನ್, ಡಾ.ಅಧಿತ್ಯ, ಡಾ.ವರುಣ್, ಡಾ.ವೇಣು, ಡಾ.ಅಮರದೀಪ್ ಮತ್ತು ಅರಿವಳಿಕೆ ತಜ್ಞರಾದ ಡಾ.ಪಾಂಡುನಾಯಕ್, ಡಾ. ಪವಾನಿ, ಡಾ.ಮಾಧವಿ, ಡಾ.ಬಾಲಜಿ ಹಾಗೂ ಡಾ.ಮಾನಸ, ಡಾ.ವೆನ್ನೆಲಾ, ಡಾ.ರಘುನಾಥ್, ಡಾ.ಶ್ರವಂತಿ, ಡಾ.ಚಿತ್ರಾ, ಡಾ.ಫರಾ ವೈದ್ಯಕೀಯ ತಂಡದಲ್ಲಿದ್ದರು.
ಇದನ್ನೂ ಓದಿ: ಬೊಜ್ಜು ಹೊಂದಿರುವ ಮಹಿಳೆಯರೇ ಎಚ್ಚರ: ಗರ್ಭನಿರೋಧಕ ಮಾತ್ರೆಗಳಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ