ಹೈದರಾಬಾದ್: ಗೋಧ್ರೋತ್ತರ ಹಿಂಸಾಚಾರ ಕುರಿತಾಗಿ ಬಿಬಿಸಿ ಚಿತ್ರಿಸಿರುವ ಇಂಡಿಯಾ: ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರವನ್ನು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಕ್ಯಾಂಪಸ್ನಲ್ಲಿಯೇ ಪ್ರದರ್ಶಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ದ್ವೇಷಭಾವನೆಯ ಅಂಶಗಳುಳ್ಳ ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ಅದರ ಪ್ರದರ್ಶನ ನಡೆದಿದೆ.
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಫ್ರೆಟರ್ನಿಟಿ ಗ್ರೂಪ್ ಎಂದು ಕರೆಯಲ್ಪಡುವ ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯೊಳಗೆ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಸಿದೆ. ಈ ಗುಂಪುಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
"ವಿಶ್ವವಿದ್ಯಾಲಯದಲ್ಲಿ ವಿವಾದಿತ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿದ ಬಗ್ಗೆ ವಿವಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇಸ್ಲಾಮಿಕ್ ಫೆಡರೇಷನ್‌ನ ಕೆಲ ವಿದ್ಯಾರ್ಥಿಗಳು ಅನುಮತಿ ಇಲ್ಲದೇ, ನಿಷೇಧಿತ ಚಿತ್ರವನ್ನು ವಿವಿ ಆವರಣದೊಳಗೆ ಪ್ರದರ್ಶಿಸಿದ್ದಾರೆ. ಸಂಘಟಕರ ಮೇಲೆ ಕ್ರಮ ಕೈಗೊಳ್ಳಬೇಕು" ಎಂದು ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಮುಖಂಡ ಮಹೇಶ್ ಒತ್ತಾಯಿಸಿದ್ದಾರೆ.
"ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಸ್ಕ್ರೀನಿಂಗ್ ಆಯೋಜಿಸಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ಆದರೆ, ಯಾವುದೇ ಲಿಖಿತ ದೂರು ಬಂದಿಲ್ಲ. ದೂರು ಬಂದಲ್ಲಿ ತನಿಖೆ ನಡೆಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಕುರಿತು ಸುಳ್ಳು ಮಾಹಿತಿ: ಬಿಬಿಸಿ ತಯಾರಿಸುವ ಸಾಕ್ಷ್ಯಚಿತ್ರ ಗುಜರಾತ್ ಗಲಭೆಯ ಕುರಿತಾಗಿದೆ. ಇದರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಅಂಶಗಳಿವೆ ಎಂಬುದು ವಿವಾದಕ್ಕೆ ಕಾರಣವಾಗಿದೆ. ಇದೊಂದು ಪೂರ್ವನಿರ್ಧರಿತ ಮತ್ತು ಸುಳ್ಳು ಪ್ರಚಾರದ ಸಾಕ್ಷ್ಯಚಿತ್ರ ಎಂದು ಬಿಜೆಪಿ ಈಗಾಗಲೇ ಟೀಕಿಸಿದೆ. ಅಲ್ಲದೇ, ಇದನ್ನು ಭಾರತದಲ್ಲಿ ಪ್ರದರ್ಶಿಸಬಾರದು ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಅಲ್ಲದೇ, ಯಾವುದೇ ಲಿಂಕ್ಗಳು ವಿನಿಮಯವಾಗದಂತೆ ತಡೆಯಲು ಎಲ್ಲ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಈ ಮಧ್ಯೆ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಬಲವಾದ ವಿರೋಧ ವ್ಯಕ್ತವಾಗಿದ್ದು, ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ಮಾಜಿ ಯೋಧರು ಸೇರಿದಂತೆ 300ಕ್ಕೂ ಹೆಚ್ಚು ಗಣ್ಯರು ಈ ಸಾಕ್ಷ್ಯಚಿತ್ರವನ್ನು ಖಂಡಿಸಿದ್ದಾರೆ. ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ಮೋದಿ ಅವರಿಗೆ ಕ್ಲೀನ್ಚಿಟ್ ನೀಡಿದೆ. ಆದಾಗ್ಯೂ ಘಟನೆಯಲ್ಲಿ ಮೋದಿ ಅವರನ್ನು ತಪ್ಪಿತಸ್ಥರು ಎಂದು ಬಿಂಬಿಸಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಪಿತೂರಿ, ತನಿಖೆಗೆ ಒತ್ತಾಯ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ವಿರುದ್ಧ ಅಖಿಲ ಭಾರತ ವಕೀಲರ ಸಂಘ ಕಿಡಿಕಾರಿದೆ. ಅಲ್ಲದೇ, ಇದನ್ನು "ಅಂತಾರಾಷ್ಟ್ರೀಯ ಪಿತೂರಿ" ಎಂಬ ಕೋನದಲ್ಲಿ ವಿಶೇಷ ತನಿಖೆ ನಡೆಸಬೇಕು ಎಂದು ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.
ಎಐಬಿಎ ಅಧ್ಯಕ್ಷ ಆದಿಶ್ ಸಿ.ಅಗರ್‌ವಾಲಾ ಅವರು, “ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷನಾಗಿ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಬಿಬಿಸಿಯ ಡಾಕ್ಯುಮೆಂಟರಿ ಮೂಲಕ ಅಂತಾರಾಷ್ಟ್ರೀಯ ಪಿತೂರಿ ನಡೆಸಿರುವ ಶಂಕೆ ಇದೆ. ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದೇನೆ. ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞ ಮತ್ತು ತನಿಖಾಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿದ್ದೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಗಲಭೆಯ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ: 'ಅಪಪ್ರಚಾರದ ಉದ್ದೇಶ'- ಭಾರತ ಖಂಡನೆ