ಹೈದರಾಬಾದ್ : ತನ್ನ ಆನ್‌ಲೈನ್ ಗೆಳತಿಯನ್ನು ಭೇಟಿಯಾಗಲು 2017ರಲ್ಲಿ ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಪ್ರಶಾಂತ್ ಎಂಬ ಹೈದರಾಬಾದ್ ಮೂಲದ ಯುವಕನನ್ನು ನಾಲ್ಕು ವರ್ಷದ ಬಳಿಕ ಪಾಕಿಸ್ತಾನ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪ್ರಶಾಂತ್ ತನ್ನ ಆನ್‌ಲೈನ್ ಗೆಳತಿಯನ್ನು ಹುಡುಕಿಕೊಂಡು 2017ರಲ್ಲಿ ಗಡಿ ದಾಟಿ ಪಾಕ್ಗೆ ತೆರಳಿದ್ದರು. ಈ ವಿಷಯ ಬೆಳಕಿಗೆ ಬಂದ ಕೂಡಲೇ ಪ್ರಶಾಂತ್ ಅವರ ತಂದೆ ಬಾಬುರಾವ್ ಅವರು ತಮ್ಮ ಮಗನ ಬಿಡುಗಡೆಗಾಗಿ ಹಲವಾರು ಪ್ರಯತ್ನಗಳನ್ನು ಮಾಡಿದರು.
2019ರಲ್ಲಿ ಬಾಬುರಾವ್ ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ಅವರನ್ನು ಭೇಟಿಯಾಗಿ ತಮ್ಮ ಮಗನನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ವಿನಂತಿಸಿದರು. ಅವರ ಮನವಿಗೆ ಪೊಲೀಸ್ ಆಯುಕ್ತರು ಸ್ಪಂದಿಸಿ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದರು.
ಅಂತಿಮವಾಗಿ ಪ್ರಶಾಂತ್ ಅವರನ್ನು ವಾಘಾ ಗಡಿಯಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ರು. ಪ್ರಶಾಂತ್ ಇಂದು ಸಂಜೆ ಹೈದರಾಬಾದ್‌ಗೆ ಆಗಮಿಸುವ ಸಾಧ್ಯತೆ ಇದೆ. ಪಾಕಿಸ್ತಾನದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಮಗ ಮರಳುತ್ತಿರುವ ಹಿನ್ನೆಲೆ, ಆತನ ಕುಟುಂಬ ಸದಸ್ಯರಲ್ಲಿ ಸಂತಸ ಮನೆಮಾಡಿದೆ. ಅವನ ಬಿಡುಗಡೆಗೆ ಸಹಾಯ ಮಾಡಿದ ಅಧಿಕಾರಿಗಳಿಗೆ ಪ್ರಶಾಂತ್ ಕುಟುಂಬವು ಕೃತಜ್ಞತೆ ತಿಳಿಸಿದೆ.