ಹೈದರಾಬಾದ್(ತೆಲಂಗಾಣ): ದೀಪಾವಳಿ ಹಬ್ಬದಿನದಂದೇ ಹೈದರಾಬಾದ್ನಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಬಜಾರ್‌ಘಾಟ್‌ನ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ನಾಲ್ಕು ಮಹಡಿಗಳಿಗೆ ವ್ಯಾಪಿಸಿದೆ. ಈ ಅವಘಡದಲ್ಲಿ ದಟ್ಟ ಹೊಗೆಯಿಂದಾಗಿ ಇದುವರೆಗೆ 9 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ನಾಲ್ಕು ದಿನದ ಮಗು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಗ್ಯಾರೇಜ್ನಲ್ಲಿ ಹೊತ್ತಿಕೊಂಡ ಬೆಂಕಿ: ಕಟ್ಟಡದ ನೆಲಮಹಡಿಯಲ್ಲಿ ಗ್ಯಾರೇಜ್ ಇದ್ದ ಕಾರಣ ಕಾರನ್ನು ದುರಸ್ತಿ ಮಾಡುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಅಲ್ಲಿ ಡೀಸೆಲ್ ಹಾಗೂ ಕೆಮಿಕಲ್ ಡ್ರಮ್ ಗಳಿದ್ದು, ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ಕಟ್ಟಡದ ಸುತ್ತಲೂ ವ್ಯಾಪಿಸಿದೆ. ಇದರಿಂದ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿದ್ದವರು ಭಯಭೀತರಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಗ್ಯಾರೇಜ್‌ನಲ್ಲಿದ್ದ ಉಳಿದ ರಾಸಾಯನಿಕ ಕ್ಯಾನ್‌ಗಳನ್ನು ಹೊರ ತಂದಿದ್ದಾರೆ. ಅಪಘಾತದಿಂದಾಗಿ ಗ್ಯಾರೇಜ್‌ನಲ್ಲಿದ್ದ ಹಲವು ವಾಹನಗಳು ಸುಟ್ಟು ಕರಕಲಾಗಿವೆ.
ಶೋಕ ಸಾಗರದಲ್ಲಿ ಮೃತರ ಕುಟುಂಬ: ಬಜಾರ್‌ಘಾಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತರ ಕುಟುಂಬಸ್ಥರು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಗುರುತಿಸಲಾಗಿದೆ. ಘಟನೆಯಲ್ಲಿ 4 ದಿನದ ಮಗುವೂ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ದಿನದ ಮಗು ಸಾವು: ಹುಟ್ಟಿದ ನಾಲ್ಕು ದಿನಗಳಲ್ಲೇ ಮಗು ಸಾವನ್ನಪ್ಪಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರ್ಘಟನೆಯಲ್ಲಿ ಇದುವರೆಗೆ 9 ಮಂದಿ ಸಾವನ್ನಪ್ಪಿದ್ದು, ಇತರರು ಪ್ರಜ್ಞಾಹೀನರಾಗಿದ್ದಾರೆ. ಮೂರ್ಛೆ ಸ್ಥಿತಿಗೆ ತಲುಪಿದವರನ್ನು ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ. GHMC ಮತ್ತು NDRF ಸಿಬ್ಬಂದಿ ಘಟನಾ ಸ್ಥಳದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಕಟ್ಟಡದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಏಣಿಗಳ ಸಹಾಯದಿಂದ ಸುರಕ್ಷಿತವಾಗಿ ಹೊರತರಲಾಗಿದೆ.
ಡಿಸಿಪಿ ಪ್ರತಿಕ್ರಿಯೆ: ಡಿಸಿಪಿ ವೆಂಕಟೇಶ್ವರಲು ಬಜಾರ್‌ಘಾಟ್‌ನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ಗ್ಯಾರೇಜ್ ಇದೆ. ಅಲ್ಲಿ ಕಾರನ್ನು ರಿಪೇರಿ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ನೆಲ ಮಹಡಿಯಲ್ಲಿ ಡೀಸೆಲ್ ಮತ್ತು ರಾಸಾಯನಿಕ ಡ್ರಮ್‌ಗಳಿವೆ. ಇದರಿಂದ ಬೆಂಕಿ ಹೊತ್ತಿಕೊಂಡು ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಗಳಿಗೂ ವ್ಯಾಪಿಸಿದೆ. ಕೆಲವು ಕುಟುಂಬಗಳು ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬಾಡಿಗೆಗೆ ಇವೆ. ಕೆಲವರು ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಓದಿ: ಬೆಂಗಳೂರಲ್ಲಿ ಐದಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ; ಫರ್ನಿಚರ್ ಶೋರೂಂ ಅಗ್ನಿಗಾಹುತಿ