ನವದೆಹಲಿ : 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವ್ಯಕ್ತಿಯೋರ್ವ ಹೆಂಡತಿಯಿಂದ ವಿಚ್ಛೇದನ ಬಯಸಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾನೆ. 'ನನ್ನ ಹೆಂಡತಿ ಹೆಣ್ಣಲ್ಲ, ಆಕೆಯಿಂದ ನನಗೆ ವಿಚ್ಛೇದನ ನೀಡುವಂತೆ' ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಆತನ ಅರ್ಜಿ ಪುರಸ್ಕಾರ ಮಾಡಿರುವ ಸರ್ವೋಚ್ಛ ನ್ಯಾಯಾಲಯ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ ಈ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ 2021ರ ಜುಲೈ ತಿಂಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ, ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನೆ ಮಾಡಿದ್ದ ಅರ್ಜಿದಾರ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದರು.
ಏನಿದು ಪ್ರಕರಣ?: 2016ರಲ್ಲಿ ಜೋಡಿವೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಮೊದಲ ರಾತ್ರಿಯಂದು ತಾನು ಋತುಚಕ್ರಕ್ಕೆ ಒಳಗಾಗಿದ್ದೇನೆಂದು ಹೇಳಿ ಯುವತಿ ಕೆಲ ದಿನಗಳ ಕಾಲ ಆತನಿಂದ ದೂರ ಉಳಿದಿದ್ದಾರೆ. ಇದಾದ ಬಳಿಕ ಇಬ್ಬರು ಒಂದಾಗಲು ಮುಂದಾದಾಗ ಆಕೆ ಹೆಣ್ಣಲ್ಲ ಎಂಬ ವಿಚಾರ ಗಂಡನಿಗೆ ತಿಳಿದಿದೆ.
ಇದರ ಬೆನ್ನಲ್ಲೇ ಆಕೆಯನ್ನ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾನೆ. ಈ ವೇಳೆ ವೈದ್ಯರು ಯುವತಿಗೆ ಇಂಪರ್ಪೊರೇಟ್ ಹೈಮೆನ್(ಹೆಣ್ಣು ಜನನಾಂಗ ಸಂಪೂರ್ಣವಾಗಿ ಮುಚ್ಚುವುದು) ಎಂಬ ಸಮಸ್ಯೆ ಇರುವ ಬಗ್ಗೆ ತಿಳಿಸಿದ್ದಾರೆ. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ, ಕೃತಕ ಯೋನಿ ರಚಿಸಿದರೂ, ಆಕೆಗೆ ಗರ್ಭಪಾತವಾಗುವ ಸಾಧ್ಯತೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ ನನಗೆ ಮೋಸ ಮಾಡಿ ಮದುವೆ ಮಾಡಿಸಿದ್ದಾರೆಂದು ಆರೋಪಿಸಿರುವ ವ್ಯಕ್ತಿ, ಪೊಲೀಸ್ ಠಾಣೆ ಹಾಗೂ ಮಧ್ಯಪ್ರದೇಶ ಕೋರ್ಟ್ನಲ್ಲಿ ದೂರು ದಾಖಲು ಮಾಡಿದ್ದಾನೆ. ಆದರೆ, ಮಧ್ಯಪ್ರದೇಶ ಕೋರ್ಟ್ ಈ ಅರ್ಜಿ ವಜಾಗೊಳಿಸಿರುವ ಬೆನ್ನಲ್ಲೇ, ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈತನ ಮನವಿ ಪುರಸ್ಕರಿಸಿರುವ ಸುಪ್ರೀಂಕೋರ್ಟ್, ಮುಂದಿನ ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರ ಸಲ್ಲಿಕೆ ಮಾಡಿರುವ ವೈದ್ಯಕೀಯ ವರದಿ ಸುಪ್ರೀಂಕೋರ್ಟ್ನಲ್ಲಿ ಹೆಚ್ಚು ಗಮನ ಸೆಳೆದಿದ್ದು, ಇದೀಗ ಉತ್ತರ ನೀಡುವಂತೆ ಯುವತಿಗೆ ಸೂಚನೆ ನೀಡಿದೆ ಸುಪ್ರೀಂಕೋರ್ಟ್.