ಹೈದರಾಬಾದ್(ತೆಲಂಗಾಣ): ಇಬ್ಬರು ಪತ್ನಿಯರ ಕಿತ್ತಾಟದಿಂದ ರೋಸಿ ಹೋಗಿದ್ದ ಪತಿ ತನ್ನ ಎರಡನೇ ಪತ್ನಿಗೆ ಇಂಜೆಕ್ಷನ್ ನೀಡಿ ಕೊಂದ ಹೇಯ ಘಟನೆ ತೆಲಂಗಾಣದ ಖಮ್ಮಂನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಂದ ಪಾಪಿ ಪತಿ ಭಿಕ್ಷಂನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ದೂಡಿದ್ದಾರೆ.
ಘಟನೆ ಏನು?: ಖಮ್ಮಂ ಜಿಲ್ಲೆಯ ನಿವಾಸಿಯಾದ ಭಿಕ್ಷಂ ಅರಿವಳಿಕೆ ತಜ್ಞರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ. ಮೊದಲ ಹೆಂಡತಿಗೆ ಮಗುವಾಗದ ಕಾರಣ ತನಗಿಂತ 20 ವರ್ಷ ಚಿಕ್ಕವಳಾದ ನವೀನ ಎಂಬಾಕೆ ಜೊತೆ ಎರಡನೇ ವಿವಾಹವಾಗಿದ್ದ. ವರ್ಷಗಳ ಬಳಿಕ ನವೀನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಬಳಿಕವೇ ನೋಡಿ ಇಬ್ಬರು ಪತ್ನಿಯೆ ಮಧ್ಯೆ ಜಗಳ ಶುರುವಾಗಿತ್ತು.
ಯಾವ್ಯಾವುದೋ ಕಾರಣಕ್ಕೆ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದರು. ಇದನ್ನು ಕಂಡ ಪತಿ ಭಿಕ್ಷಂ ಪ್ರತಿ ಬಾರಿ ಇಬ್ಬರ ಮಧ್ಯೆ ಸಂಧಾನ ಏರ್ಪಡಿಸಿ ಜಗಳ ಶಮನ ಮಾಡುತ್ತಿದ್ದ. ಆದರೆ, ಪತ್ನಿಯರ ನಡುವಿನ ವೈಮನಸ್ಯ ಮಾತ್ರ ತಣ್ಣಗಾಗಿರಲಿಲ್ಲ.
ಈ ಮಧ್ಯೆ ನವೀನ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಯನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಸಮಯವನ್ನು ಬಳಸಿಕೊಂಡ ಪತಿ ಭಿಕ್ಷಂ ಮಧ್ಯರಾತ್ರಿ 2 ಗಂಟೆ ಹೊತ್ತಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಆಕೆಗೆ ಚುಚ್ಚುಮದ್ದು ನೀಡಿದ್ದ. ಇದರಿಂದ ಬಾಣಂತಿ ನವೀನ ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಳು.
ಆಸ್ಪತ್ರೆ ಮೇಲೆಯೇ ಆರೋಪ ಮಾಡಿದ: ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ತನ್ನ ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿ ಭಿಕ್ಷಂ ಕುಟುಂಬಸ್ಥರ ಜೊತೆ ಆಸ್ಪತ್ರೆ ವಿರುದ್ಧ ಧರಣಿ ಮಾಡಿದ್ದ. ಆಸ್ಪತ್ರೆಯವರಿಗೂ ಕೂಡ ಆಕೆ ಮೃತಪಟ್ಟಿದ್ದರ ಬಗ್ಗೆ ತಿಳಿಯದೇ ಪರಿಹಾರ ನೀಡಲೂ ಒಪ್ಪಿದ್ದರು. ಅದಕ್ಕೆ ಆರೋಪಿ ಕೂಡ ಒಪ್ಪಿದ್ದ. ಬಳಿಕ ಪತ್ನಿಯ ಮೃತದೇಹವನ್ನು ತನ್ನ ಗ್ರಾಮಕ್ಕೆ ಕೊಂಡೊಯ್ಯುವ ಬದಲು ಖಮ್ಮಂನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದ.
ಸಿಸಿಟಿವಿಯಲ್ಲಿತ್ತು ಕೊಲೆ ರಹಸ್ಯ: ಇದರಿಂದ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗಲೇ ನೋಡಿ ಸತ್ಯ ಹೊರಬಿದ್ದಿತ್ತು. ಇದನ್ನು ಕಂಡ ಆಸ್ಪತ್ರೆಯವರೇ ದಂಗಾಗಿದ್ದರು. ಬಾಣಂತಿಗೆ ಚುಚ್ಚುಮದ್ದು ನೀಡಿ ಸಾಯಿಸಿದ್ದು ಆತನೇ ಎಂದು ಖಚಿತಪಡಿಸಿಕೊಂಡ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಭಿಕ್ಷಂನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಪತ್ನಿಯನ್ನು ಕೊಂದಿದ್ದು ತಾನೇ ಎಂದು ಸತ್ಯ ಒಪ್ಪಿಕೊಂಡಿದ್ದಾನೆ. ಕೊಲೆ ಆರೋಪದ ಮೇಲೆ ಆತನನ್ನು ಜೈಲಿಗೆ ಹಾಕಲಾಗಿದೆ.
ಓದಿ: ಏಳು ಜನರನ್ನು ಕೊಲ್ಲುವುದಾಗಿ ಫೇಸ್ಬುಕ್ನಲ್ಲಿ ಬೆದರಿಕೆ: ಹೆಣ್ಣು ಹುಟ್ಟಿದ್ದಕ್ಕೆ ಕೋಪ?