ಕರೀಂನಗರ, ತೆಲಂಗಾಣ: ಸ್ವಾತಂತ್ರ್ಯ ಹೋರಾಟದಲ್ಲಿ ನಾರಿ ಶಕ್ತಿಯ ಪ್ರಾಮುಖ್ಯತೆ ಬಗ್ಗೆ ಮೋದಿ ಸ್ಮರಿಸಿಕೊಂಡಿದ್ದರು. ಆದರೆ ರಾಷ್ಟ್ರಧ್ವಜಾರೋಹಣ ಬಳಿಕ ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಕೇಶವಪಟ್ಟಣದಲ್ಲಿ ನಡೆದಿದೆ. 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸಿರಿಶಾಳನ್ನು ಪ್ರವೀಣ್ ದಾರುಣವಾಗಿ ಕೊಲೆ ಮಾಡಿದ್ದಾನೆ.
ಚಿಗುರುಮಾಮಿಡಿ ತಾಲೂಕಿನ ಇಂದುರ್ತಿ ಗ್ರಾಮದ ನಿವಾಸಿ ಕನಕಂ ಪ್ರವೀಣ್ ಹಾಗೂ ಕೇಶವಪಟ್ಟಣದ ನಿವಾಸಿ ಸಿರಿಶಾ (30) 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ 9 ಮತ್ತು 8 ವರ್ಷದ ಇಬ್ಬರು ಮಕ್ಕಳಿದ್ದಾರೆ. ನಾಲ್ಕು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸಿರಿಶಾ ಕೆಲಸ ಮಾಡುತ್ತಿದ್ದಾರೆ. ಗಂಡ ಹೆಂಡತಿ ನಡುವೆ ಕೌಟುಂಬಿಕ ಕಲಹವಿತ್ತು.
ಸಿರಿಶಾ ಕೇಶವಪಟ್ಟಣದಲ್ಲಿ ನೆಲೆಸಿದ್ದು, ವಿಚ್ಛೇದನಕ್ಕಾಗಿ ಪತಿಗೆ ನೋಟಿಸ್ ಕಳುಹಿಸಿದ್ದರು. ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ನಡೆದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ಸಿಹಿ ಹಂಚಲು ತಯಾರಿ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಪ್ರವೀಣ್ ಅವರನ್ನು ರಸ್ತೆಗೆ ಎಳೆದೊಯ್ದಿದ್ದಾನೆ. ಜನರ ಸಮ್ಮುಖದಲ್ಲಿ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಮಾರ್ ಎಂಬ ಯುವಕ ತಡೆಯಲು ಮುಂದಾದಾಗ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ. ಈ ವೇಳೆ ಕುಮಾರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕತ್ಸೆ ಪಡೆಯುತ್ತಿದ್ದಾರೆ.
ಇನ್ನು ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ಆಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಮನೆಯಲ್ಲಿ ಚಿನ್ನ ಕದ್ದು ಮದ್ಯ, ಗಾಂಜಾ ಸೇವಿಸಿ ಐಷಾರಾಮಿ ಜೀವನ: ಸುಪಾರಿ ಕೊಟ್ಟು ಮಗನ ಕೊಲ್ಲಿಸಿದ ತಂದೆ