ಪೂರ್ವ ಗೋದಾವರಿ(ಆಂಧ್ರಪ್ರದೇಶ): ಗಂಡ - ಹೆಂಡತಿ ನಡುವೆ ಬೆಡ್ರೂಮ್ನಲ್ಲಿ ನಡೆಯುವ ರೊಮ್ಯಾಂಟಿಕ್ ಸೀನ್ ಅವರಿಗೆ ಮಾತ್ರ ಸೀಮಿತವಾದದ್ದು. ಭಾರತೀಯ ಸಂಸ್ಕೃತಿಯಲ್ಲಿ ಅದಕ್ಕೆ ಮಹತ್ವದ ಸ್ಥಾನ ಸಹ ಇದೆ. ಆದರೆ, ಈ ಪ್ರಣಯ ನಾಲ್ಕು ಜನರ ಕಣ್ಣಿಗೆ ಬಿದ್ದರೆ? ಮಾನ-ಮರ್ಯಾದೆ ಮಾತ್ರವಲ್ಲ. ಸಂಸಾರದಲ್ಲಿ ಅಲ್ಲೊಲ್ಲ ಕಲ್ಲೊಲ್ಲ ಆಗುತ್ತದೆ. ಸದ್ಯ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಅಂತಹದೊಂದು ಘಟನೆ ನಡೆದಿದ್ದು, ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ತಿಂಗಳ ಹಿಂದೆ ಯುವತಿಯೊಬ್ಬಳು ಕಾಕಿನಾಡು ಜಿಲ್ಲೆಯ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದರು. ವಧುವಿನ ಮನೆಯವರು ಅಪಾರ ಪ್ರಮಾಣದಲ್ಲಿ ವರದಕ್ಷಿಣೆ ನೀಡಿ, ಅದ್ಧೂರಿಯಾಗಿ ಮದುವೆ ಸಹ ಮಾಡಿಕೊಟ್ಟಿದ್ದರು. ಕೆಲಕಾಲ ದಾಂಪತ್ಯ ಜೀವನ ಸರಾಗವಾಗಿ ನಡೆದಿದೆ. ಒಳ್ಳೆಯ ಅಳಿಯ ಸಿಕ್ಕನೆಂದು ಹುಡುಗಿಯ ಪೋಷಕರು ಖುಷಿ ಪಡಲು ಶುರು ಮಾಡಿದ್ದಾರೆ. ಇಷ್ಟರಲ್ಲೇ ಆತನ ನಿಜ ಬಣ್ಣ ಬಯಲಾಗಲು ಶುರುವಾಗಿದೆ.
ಬೆಡ್ ರೂಮ್ ವಿಡಿಯೋ ಚಿತ್ರೀಕರಣಕ್ಕೆ ಒತ್ತಡ: ಗಂಡ-ಹೆಂಡತಿ ನಡುವಿನ ಬೆಡ್ರೂಮ್ ರೊಮ್ಯಾಂಟಿಕ್ ಸೀನ್ ಚಿತ್ರೀಕರಣಕ್ಕಾಗಿ ಪತ್ನಿ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾನೆ. ಇದರಿಂದ ಆಕೆ ದಿಗ್ಬ್ರಮೆಗೊಂಡಿದ್ದು, ಪತಿ ಬಳಿ ಹತ್ತಾರು ಸಲ ಮನವಿ ಮಾಡಿಕೊಂಡಿದ್ದಾಳೆ. ಆದರೆ, ಗಂಡನ ಮನಸು ಮಾತ್ರ ಕರಗಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ನಿತ್ಯ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಹೀಗಾಗಿ, ಹೆಂಡತಿಗೆ ಮುಂದಿನ ಹಾದಿ ಕಾಣದಂತಾಗಿದೆ.
ಪ್ರಕರಣದ ಬಗ್ಗೆ ಯಾರಿಗೂ ಹೇಳದೇ ತನ್ನೊಳಗೆ ನೋವು ಅನುಭವಿಸಿರುವ ಯುವತಿ ತೀವ್ರ ಖಿನ್ನತೆಗೊಳಗಾಗಿದ್ದಾಳೆ. ಇದರ ಬೆನ್ನಲ್ಲೇ ಗಂಡನ ವಿಕೃತ ಮನಸ್ಸಿಗೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ್ದಾಳೆ. ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಜೊತೆಗೆ ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.