ನಾಗೌರ್ ( ರಾಜಸ್ಥಾನ) : ಜಿಲ್ಲೆಯ ಕೌರಿ ಕಲನ್ ಗ್ರಾಮ ಪಂಚಾಯತ್ನಲ್ಲಿ ಮೇ 1 ರ ಹೊತ್ತಿಗೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ( ಶೇ 100 ರಷ್ಟು ಮಂದಿಗೆ) ಕೋವಿಡ್ ಲಸಿಕೆ ನೀಡುವ ಮೂಲಕ ಮಹತ್ತರ ಸಾಧನೆ ಮಾಡಲಾಗಿದೆ.
ಗ್ರಾಮ ಪಂಚಾಯತ್ನ ಈ ಕಾರ್ಯವನ್ನು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿನ ಪ್ರಾಥಮಿಕ ಆರೋಗ್ಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದುವರೆಗೆ ಒಂದೇ ಒಂದು ಕೋವಿಡ್ ಪ್ರಕರಣ ವರದಿಯಾಗದಿರುವುದು ಮತ್ತೊಂದು ಸಾಧನೆಯಾಗಿದೆ. ಇದಕ್ಕೆಲ್ಲ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರುವುದೇ ಕಾರಣ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ದೇಶದಲ್ಲಿ 40 ದಿನಗಳ ಬಳಿಕ 2 ಲಕ್ಷ ಗಡಿಯಿಂದ ಕೆಳಗಿಳಿದ ಕೋವಿಡ್ ಸೋಂಕು ಪ್ರಕರಣ
ಕೌರಿ ಕಲನ್ ಗ್ರಾಮದ ಜನರ ಆರೋಗ್ಯ ಪರಿಸ್ಥಿತಿಯ ಬಗ್ಗೆ ದೇಗಾನಾ ವಲಯದ ಮುಖ್ಯ ವೈದ್ಯಾಧಿಕಾರಿ ಡಾ. ರಾಮ್ ಕಿಶೋರ್ ಸರನ್ ಮತ್ತು ವೈದ್ಯಾಧಿಕಾರಿ ಡಾ. ಜೈಪಾಲ್ ಮಂದಾ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದರು. ಇದರ ಜೊತೆಗೆ ವೈದ್ಯಕೀಯ ಸಿಬ್ಬಂದಿ ಗಜೇಂದ್ರ ಪರಿಹಾರ್, ಎಲ್ಹೆಚ್ವಿ ಸುಷ್ಮಾ ಸ್ಯಾಮ್ಯುಯೆಲ್, ಎಎನ್ಎಂಗಳಾದ ಅಂಜುಮ್ ಮತ್ತು ಸುಮನ್, ನರ್ಸ್ ಊರ್ಮಿಳಾ ಚೌಧರಿ, ರಾಧೆಶ್ಯಾಮ್ ಮುಂಡೆಲ್, ಸುಶೀಲಾ ಮತ್ತು ಗಂಗದೇವ್, ಸಿಒ ಶ್ರವಣರಾಮ್ ಕಸ್ವಾನ್, ವೈದ್ಯಕೀಯ ಸಿಬ್ಬಂದಿ ಓಂಪ್ರಕಾಶ್ ಗುಜರಾತಿ, ಎಲ್.ಟಿ.ಮನೀಶ್ ಮುಂತಾದವರು ಸಹಕಾರ ನೀಡಿದ್ದರು. ಇವರೆಲ್ಲರ ಪರಿಶ್ರಮದಿಂದ ಗ್ರಾಮ ಸೋಂಕು ಮುಕ್ತವಾಗಿದೆ ಜೊತೆಗೆ ಕೋವಿಡ್ ಲಸಿಕೆ ವಿತರಣೆಯಲ್ಲೂ ಸಾಧನೆ ಮಾಡಲಾಗಿದೆ.
ಕೌರಿ ಕಲಾನ್ ಗ್ರಾಮ ಪಂಚಾಯತ್ನ ಇತ್ತೀಚಿನ ಮತದಾರರ ಪಟ್ಟಿಯ ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2,532 ಜನರಿದ್ದಾರೆ. ಸಮೀಪದ ಗ್ರಾಮದ 109 ಮಂದಿ ಸೇರಿದಂತೆ ಮೇ 12 ರವರೆಗೆ ಇಲ್ಲಿ 2,641 ಜನರಿಗೆ ಲಸಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಜೈಪಾಲ್ ಮಂದಾ ತಿಳಿಸಿದ್ದಾರೆ.