ಕೃಷ್ಣಗಿರಿ (ತಮಿಳುನಾಡು): ನಿಧಿ ಆಸೆಗಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ರೈತ ಲಕ್ಷ್ಮಣನ್ (52) ಕೊಲೆಯಾದ ವ್ಯಕ್ತಿ. ಇವರು ತೆಂಕಣಿಕೋಟೈ ತಾಲೂಕಿನ ಕೆಳಮಂಗಲ ಸಮೀಪದ ಪುದೂರು ಗ್ರಾಮದವರು. ನಾಲ್ಕು ವರ್ಷಗಳ ಹಿಂದೆ ಅವರ ಪತ್ನಿ ಲಕ್ಷ್ಮಿ ಮೃತಪಟ್ಟಿದ್ದರು. ಇವರಿಗೆ ನಾಗರಾಜ್, ಶಿವಕುಮಾರ್ ಮತ್ತು ಠಾಣಲಕ್ಷ್ಮಿ ಎಂಬ ಮೂವರು ಮಕ್ಕಳಿದ್ದಾರೆ.
ತೋಟದಲ್ಲಿ ಶವ ಪತ್ತೆ: ಸೆ.28ರಂದು ಲಕ್ಷ್ಮಣನ್ ಮನೆಯ ಸಮೀಪದ ಅಡಿಕೆ ತೋಟದಲ್ಲಿ ಅವರ ಶವ ನಿಗೂಢವಾಗಿ ಪತ್ತೆಯಾಗಿತ್ತು. ಆ ಸ್ಥಳದಲ್ಲಿ ವೀಳ್ಯದೆಲೆ, ನಿಂಬೆಹಣ್ಣು, ಅರಿಶಿನ, ಕುಂಕುಮ, ಕೋಳಿ, ಗುದ್ದಲಿ ಸೇರಿದಂತೆ ಪೂಜಾ ಸಾಮಗ್ರಿಗಳಿದ್ದವು. ಈ ಕುರಿತು ಕೆಳಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಕ್ಷ್ಮಣ್ ಅವರ ಮೃತದೇಹವನ್ನು ತೆಂಕಣಿಕೋಟೈ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಧರ್ಮಪುರಿ ಮೂಲದ ವಾಚ್‌ಮನ್ ಮಣಿ (65) ಲಕ್ಷ್ಮಣನ್ ಅವರನ್ನು ಕೊಲೆ ಮಾಡಿರುವುದು ತಿಳಿದುಬಂದಿತ್ತು.
ವಾಚ್‌ಮನ್ ಮಣಿ ಪೊಲೀಸರ ಮುಂದೆ ಹೇಳಿದ್ದೇನು?: ಕೊಲೆಯಾದ ಲಕ್ಷ್ಮಣನ್ ಮತ್ತು ನಾನು ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಲಕ್ಷ್ಮಣನ ಮಗಳು 6 ತಿಂಗಳ ಹಿಂದೆ ದುಷ್ಟಶಕ್ತಿಯಿಂದ ಬಾಧಿತಳಾದ ಕಾರಣ ಧರ್ಮಪುರಿಯಿಂದ ಚಿರಂಜೀವಿ ಎಂಬ ಧರ್ಮ ಪ್ರಚಾರಕನನ್ನು ಕರೆಸಿ ಅದನ್ನು ಹೊರಹಾಕಲಾಯಿತು. ಆ ಘಟನೆಯ ನಂತರ ಅವರು ಆ ತೋಟದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಧಿ ಇದೆ ಎಂದು ಹೇಳಿದರು.
ಯಾರನ್ನಾದರೂ ಬಲಿಕೊಟ್ಟರೆ ಮಾತ್ರ ನಿಧಿ ಸಿಗುತ್ತದೆ ಎಂದು ಹೇಳಿದ್ದರು. ಯಾರನ್ನು ಬಲಿಕೊಡಬೇಕು ಎಂದು ಯೋಚಿಸುತ್ತಿರುವಾಗ ಪುದೂರು ಗ್ರಾಮದ ರಾಣಿ ಎಂಬ ಮಹಿಳೆ ದುಷ್ಟಶಕ್ತಿಯಿಂದ ಪಾರಾಗಲು ಲಕ್ಷ್ಮಣನ್ ಬಳಿಗೆ ಬಂದಳು. ಈ ಘಟನೆ ನಡೆದ ದಿನ ಲಕ್ಷ್ಮಣನ್ ರಾಣಿಯನ್ನು ಅಡಿಕೆ ತೋಟಕ್ಕೆ ಬರುವಂತೆ ಹೇಳಿದ್ದರಂತೆ. ಆದರೆ ರಾಣಿ ಅಲ್ಲಿಗೆ ಬಂದಿರಲಿಲ್ಲ. ಆ ಸಮಯದಲ್ಲಿ ನಿಧಿಯನ್ನು ತಲುಪುವ ಆತುರದಲ್ಲಿದ್ದ ಲಕ್ಷ್ಮಣನ್ ಮಣಿಯ ಮೇಲೆ ದಾಳಿಗೆ ಮುಂದಾಗಿದ್ದರಂತೆ.
ಇದನ್ನೂ ಓದಿ: ವಾಮಾಚಾರ ಮಾಡಿದ ಅತ್ತೆ ಕೊಚ್ಚಿ ಕೊಂದ ಸೋದರಳಿಯ.. ಹೀಗೊಂದು ಭೀಕರ ಹತ್ಯೆ
ನಂತರ ಘಟನಾ ದಿನದ ಕಾದಾಟದ ವೇಳೆ ವಾಚ್‌ಮನ್ ಮಣಿಯು ಲಕ್ಷ್ಮಣನ್ಅನ್ನುಇ ಕೊಂದು ನೈವೇದ್ಯದ ಹೆಸರಿನಲ್ಲಿ ನಿಧಿಗಾಗಿ ಪೂಜೆ ಸಲ್ಲಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಮಣಿ ಪೊಲೀಸರ ಅತಿಥಿಯಾಗಿದ್ದಾನೆ.