ಪಾಟ್ನಾ : ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ಬಹುದೊಡ್ಡ ಆಘಾತವಾಗಿದೆ. ಪಕ್ಷದ 208 ನಾಯಕರು ನಿನ್ನೆ ರಾಜ್ಯದ ಆಡಳಿತ ಪಕ್ಷ ಜನತಾದಳ ಯುನೈಟೆಡ್ (ಜೆಡಿಯು)ಗೆ ಸೇರ್ಪಡೆಯಾಗಿದ್ದಾರೆ.
ಎಲ್‌ಜೆಪಿ ಶಾಸಕ ರಾಮೇಶ್ವರ ಪ್ರಸಾದ್ ಚೌರಾಸಿಯಾ ಪಕ್ಷವನ್ನು ತೊರೆದ ಒಂದು ದಿನದ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಪಕ್ಷದ ಮಾಜಿ ವಕ್ತಾರ ಕೇಶವ್ ಸಿಂಗ್ ನೇತೃತ್ವದಲ್ಲಿ ಇವರೆಲ್ಲರೂ ಜೆಡಿಯು ಸೇರಿದ್ದಾರೆ. ಜೆಡಿಯು ಅಧ್ಯಕ್ಷ ಆರ್‌ಸಿಪಿ ಸಿಂಗ್ ಮತ್ತು ಬಿಹಾರ ಘಟಕಾಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ್ ಎಲ್‌ಜೆಪಿ ನಾಯಕರನ್ನ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ವೋಟ್ ಮಾಡಿ.. ಆಸ್ಪತ್ರೆಯಿಂದಲೇ ಜನರಲ್ಲಿ ಗುಜರಾತ್ ಸಿಎಂ ಮನವಿ..
ಜೆಡಿಯುಗೆ ಸೇರಿದ ಬಳಿಕ ಚಿರಾಗ್ ಪಾಸ್ವಾನ್ ವಿರುದ್ಧ ವಾಗ್ದಾಳಿ ನಡೆಸಿದ ರಾಮನಾಥ್ ರಮಣ್ ಪಾಸ್ವಾನ್, ಚಿರಾಗ್ ಒಬ್ಬ ಕೊಲೆಗಡುಕ, ಎಲ್‌ಜೆಪಿಯು ಕೊಲೆಗಡುಕ ಪಕ್ಷ. ಬಿಹಾರದಲ್ಲಿ ಜನಿಸದ ವ್ಯಕ್ತಿಯು ರಾಜ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಿಲ್ಲ. ಚಿರಾಗ್ ಪಾಸ್ವಾನ್ ಜೈಲಿಗೆ ಹೋಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಎಲ್‌ಜೆಪಿ ಪಕ್ಷವು ಕೇವಲ ಒಂದು ಸ್ಥಾನ ಪಡೆದು ತೃಪ್ತಿಪಟ್ಟಿತ್ತು.