ನವದೆಹಲಿ : ವಯಸ್ಕರಿಗಾಗಿ ಕೊವಾವ್ಯಾಕ್ಸ್ ಕೋವಿಡ್ ಲಸಿಕೆಯನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ತಿಳಿಸಿದ್ದಾರೆ.
ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗೆ ಬಳಸಲು ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಪೂನಾವಾಲಾ ಮಾತನಾಡಿದರು. ಇಬ್ಬರೂ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಲಸಿಕೆಯ ಉತ್ಪಾದನೆಯಲ್ಲಿ ಸರ್ಕಾರವು ಯಾವಾಗಲೂ ನಮಗೆ ಸಹಾಯ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳು. ನಮ್ಮ ಕಂಪನಿಯು ಬೇಡಿಕೆಯನ್ನು ಪೂರೈಸಲು ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಡಿಸಿಜಿಐ ಅನುಮೋದನೆಯನ್ನು ಪಡೆದ ನಂತರ, ನಾವು ಕೊವಾವ್ಯಾಕ್ಸ್ ಲಸಿಕೆಯನ್ನು ಬಿಡುಗಡೆ ಮಾಡುವ ಭರವಸೆಯನ್ನು ಹೊಂದಿದ್ದೇವೆ ಎಂದರು.
ಇದಕ್ಕೂ ಮುನ್ನ, ಆದರ್ ಪೂನಾವಾಲಾ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿದರು. ಮಾಂಡವಿಯಾ ಟ್ವಿಟರ್‌ನಲ್ಲಿ ಕೋವಿಶೀಲ್ಡ್ ಲಸಿಕೆ ಪೂರೈಕೆ ಕುರಿತು ಪೂನಾವಾಲಾ ಜೊತೆ ಫಲಪ್ರದ ಚರ್ಚೆ ನಡೆದಿದೆ ಎಂದು ಹೇಳಿದರು.
ಇದನ್ನೂ ಓದಿ: 'ಆಗಸ್ಟ್‌ನಲ್ಲಿ ಮಕ್ಕಳಿಗೆ ಕೋವಿಡ್-19 ಲಸಿಕೆ ಸಾಧ್ಯತೆ'
ಭಾರತದ ಔಷಧ ನಿಯಂತ್ರಣ ಏಜೆನ್ಸಿಯ ತಜ್ಞರ ಸಮಿತಿಯು ಕಳೆದ ತಿಂಗಳು ಮಕ್ಕಳಲ್ಲಿ ಕೊವಾವ್ಯಾಕ್ ಲಸಿಕೆಯ ಬಳಕೆಗೆ ಸಂಬಂಧಿಸಿದಂತೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಸೀರಮ್ ಕಂಪನಿಗೆ ಷರತ್ತುಬದ್ಧ ಅನುಮೋದನೆ ನೀಡಿತ್ತು.
2 ರಿಂದ 17 ವರ್ಷದೊಳಗಿನ 920 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತದೆ. 12-17 ವರ್ಷ ವಯಸ್ಸಿನ ಮಕ್ಕಳನ್ನು 460 ಮಂದಿಯ ಒಂದು ಗುಂಪಾಗಿ, 2 ರಿಂದ 11 ವರ್ಷದೊಳಗಿನ ಮಕ್ಕಳನ್ನು 460 ಮಂದಿಯ ಇನ್ನೊಂದು ಗುಂಪಾಗಿ ವಿಂಗಡಿಸಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಮೆರಿಕ ಮೂಲದ ನೊವಾವ್ಯಾಕ್ಸ್ ಸಂಸ್ಥೆ ಕೊವಾವ್ಯಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.