ನವದೆಹಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿದ್ದು ಮಂಗಳವಾರದಿಂದ ಮೇ 3 ರವರೆಗೆ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳ ಹಾರಾಟವನ್ನು ಹಾಂಗ್‌ಕಾಂಗ್ ಸ್ಥಗಿತಗೊಳಿಸಿದೆ.
ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳಿಗೂ ಈ ನಿಯಮ ಅನ್ವಯಿಸಲಿದೆ. ಈ ತಿಂಗಳಿನಲ್ಲಿ ಎರಡು ವಿಸ್ಟಾರಾ ವಿಮಾನಗಳ 50 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ನಂತರ ಅಲ್ಲಿನ ಆಡಳಿತ ಎಚ್ಚೆತ್ತುಕೊಂಡಿದೆ.
ಹೊಸ ನಿಯಮದ ಪ್ರಕಾರ, ಮೇಲೆ ತಿಳಿಸಿದ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ದೇಶಗಳಿಂದ ಹಾಂಕ್ ಕಾಂಗ್ಗೆ ತೆರಳುವವರು ಪ್ರಯಾಣಕ್ಕೆ 72 ಗಂಟೆಗಳ ಮೊದಲು ಮಾಡಿದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.
ಇದನ್ನೂ ಓದಿ: ಕೋವಿಡ್ ವಿರುದ್ಧ ಹೋರಾಡಲು 'ಆಕ್ಸಿಜನ್ ಎಕ್ಸ್ಪ್ರೆಸ್' ಹಳಿಗೆ..
ಮುಂಬೈ-ಹಾಂಗ್‌ಕಾಂಗ್ ನಡುವಿನ ವಿಮಾನ ಹಾರಾಟವನ್ನು ಮೇ 2 ರವರೆಗೆ ನಿಲ್ಲಿಸಿರುವುದಾಗಿ ಹಾಂಗ್‌ಕಾಂಗ್ ಸರ್ಕಾರ ಭಾನುವಾರ ಪ್ರಕಟಿಸಿತ್ತು. ಮುಂಬೈ-ಹಾಂಗ್‌ಕಾಂಗ್ ವಿಮಾನದಲ್ಲಿ ತೆರಳಿದ ಮೂವರು ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದ ಬಳಿಕ ಈ ನಿರ್ಧಾರ ಎಂದು ತಿಳಿಸಿತ್ತು.
ಕಳೆದ ಭಾನುವಾರದವರೆಗೆ, ಏಪ್ರಿಲ್ 4 ರಂದು ದೆಹಲಿ-ಹಾಂಕ್‌ಕಾಂಗ್ ವಿಸ್ಟಾರ ವಿಮಾನದಲ್ಲಿ ಪ್ರಯಾಣಿಸಿದವರ ಪೈಕಿ 47 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ದೆಹಲಿ-ಹಾಂಗ್ ಕಾಂಗ್ ನಡುವಿನ ವಿಮಾನ ಹಾರಾಟಕ್ಕೆ ಈ ಹಿಂದೆಯೇ ಏಪ್ರಿಲ್ 6 ರಿಂದ 19 ರವರೆಗೆ ನಿರ್ಬಂಧ ಹೇರಲಾಗಿದೆ.