ಹೈದರಾಬಾದ್: ದೇಶದಲ್ಲಿ ಕೊರೊನಾ ವ್ಯಾಕ್ಸಿನೇಷನ್ ನಡೆಯುತ್ತಿದ್ದು, ಲಸಿಕೆ ಪಡೆದವರಿಗೆ ವ್ಯಾಕ್ಸಿನೇಷನ್ ಪ್ರಮಾಣಪತ್ರ ನೀಡಲಾಗುತ್ತದೆ. ಅನೇಕ ಜನರು ಆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಹಾಗೆ ಮಾಡುವುದರಿಂದ ನಿಮಗೆ ಸಮಸ್ಯೆ ಉಂಟಾಗಬಹುದು.
ಎಚ್ಚರಿಕೆ ನೀಡಿದ 'ಸೈಬರ್ ದೋಸ್ತ್':
ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಗೃಹ ಸಚಿವಾಲಯ ಹೊರಡಿಸಿರುವ ನಿರ್ದೇಶನದಲ್ಲಿ ತಿಳಿಸಲಾಗಿದೆ. ಗೃಹ ಸಚಿವಾಲಯದ 'ಸೈಬರ್ ದೋಸ್ತ್' ಎಂಬ ಸೈಬರ್ ಜಾಗೃತಿ ಬ್ಲಾಗ್ ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ನೀಡಲಾಗಿದೆ. ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ, ಲಸಿಕೆ ತೆಗೆದುಕೊಳ್ಳುವ ವ್ಯಕ್ತಿಯ ಹೆಸರು ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಬರೆಯಲಾಗಿರುತ್ತದೆ ಎಂದು 'ಸೈಬರ್ ದೋಸ್ತ್' ಟ್ವಿಟರ್ನಲ್ಲಿ ಹೇಳಲಾಗಿದೆ. ಈ ಕಾರಣದಿಂದಾಗಿ, ಯಾರೂ ತಮ್ಮ ಪ್ರಮಾಣಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು.
ಸೈಬರ್ ವಂಚನೆಯ ಅಪಾಯವಿರಬಹುದು:
ವ್ಯಾಕ್ಸಿನೇಷನ್ ಪ್ರಮಾಣಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ತಕ್ಷಣ ನಿಮ್ಮ ವೈಯಕ್ತಿಕ ಮಾಹಿತಿಯ ಕಳ್ಳತನವಾಗುವ ಭಯವಿರುತ್ತದೆ. ನಿಮ್ಮ ಮಾಹಿತಿಯನ್ನು ಈ ಪ್ರಮಾಣಪತ್ರದಲ್ಲಿ ಬರೆಯಲಾಗಿದ್ದು, ಇದು ಸೈಬರ್ ಅಪರಾಧಿಗಳಿಗೆ ಸಿಕ್ಕಿಬಿದ್ದರೆ ನಿಮಗೆ ಮೋಸವಾಗಹುದು. ಅದಕ್ಕಾಗಿಯೇ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಸೂಚಿಸಲಾಗುತ್ತಿದೆ. ಏಕೆಂದರೆ ಲಸಿಕೆ ಹೆಸರಿನಲ್ಲಿ ಸಹ ಸೈಬರ್ ಕಳ್ಳರು ಜನರನ್ನು ಮೋಸ ಮಾಡುತ್ತಿದ್ದಾರೆ ಮತ್ತು ಆರ್ಥಿಕ ನಷ್ಟವನ್ನುಂಟುಮಾಡುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ಸೈಬರ್ ಕಳ್ಳರ ಕುರಿತು ಎಚ್ಚರ:
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸೈಬರ್ ಅಪರಾಧಿಗಳ ಬಗ್ಗೆ ಎಚ್ಚರದಿಂದಿರಲು 'ಸೈಬರ್ ದೋಸ್ತ್' ಸೂಚನೆ ನೀಡಿದೆ. ಏಕೆಂದರೆ ಸಾಂಕ್ರಾಮಿಕ ಸಮಯದಲ್ಲಿ, ಫೋನ್ ಕರೆಗಳು ಅಥವಾ ಇಮೇಲ್‌ಗಳ ಮೂಲಕ ಹಣ ಸಂಗ್ರಹಿಸಲು ಬಳಸಲಾಗುತ್ತಿದೆ. ಕೊರೊನಾ ಸಂತ್ರಸ್ತರು ಅಥವಾ ಕೋವಿಡ್ -19 ಸಂಶೋಧನೆಗಾಗಿ ದೇಣಿಗೆ ಪಡೆಯುವ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ.
ನೀವು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕಗೊಳಿಸಿದರೆ, ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅದರಿಂದ ಪಡೆದು, ನಿಮಗೆ ಮೋಸ ಮಾಡಬಹುದು.