ಮುಂಬೈ(ಮಹಾರಾಷ್ಟ್ರ): ರೆಪೋ ದರ ಏರಿಕೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗೃಹ ಸಾಲವನ್ನು ತಗ್ಗಿಸುವ ನಿರ್ಣಯ ತೆಗೆದುಕೊಂಡಿದೆ. ಹೊಸ ಗೃಹ ಸಾಲಗಳಿಗೆ ಸಂಬಂಧಿಸಿದಂತೆ ಸಾಲದ ಹೊಣೆಗಾರಿಕೆಯನ್ನು (ರಿಸ್ಕ್ ವೇಯ್ಟ್) ಸಡಿಲಗೊಳಿಸಿ ಅದನ್ನು ಸಾಲದ ಮೌಲ್ಯದ ಅನುಪಾತ (loan-to-value, LTV) ಕ್ಕೆ ಜೋಡಿಸುವುದನ್ನು 2023ರ ಮಾರ್ಚ್ 31ರವರೆಗೆ ವಿಸ್ತರಿಸುವ ಬಗ್ಗೆ ಆರ್ಬಿಐ ಘೋಷಿಸಿದೆ.
ವೈಯಕ್ತಿಕ ಗೃಹ ಸಾಲದ ಹೊಣೆಗಾರಿಕೆಯನ್ನು 2020ರ ಅಕ್ಟೋಬರ್ನಲ್ಲಿ ಸಡಿಲಿಕೆ ಮಾಡಲಾಗಿದೆ. ಇದನ್ನು ಲೋನ್ ಟು ವ್ಯಾಲ್ಯು ಅನುಪಾತಕ್ಕೆ ಮಾತ್ರ ಜೋಡಿಸಲಾಗುತ್ತದೆ. ಇದರಿಂದ ಗೃಹ ನಿರ್ಮಾಣ ವಲಯಕ್ಕೆ ಅನುಕೂಲವಾಗಲಿದೆ ಎಂದು ಆರ್ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಆರ್ಬಿಐನ ಈ ನಿರ್ಧಾರವನ್ನು ತಜ್ಞರು ಸಹ ಸ್ವಾಗತಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಹಾವಳಿ ಮತ್ತು ಜಾಗತಿಕ ಬಿಕ್ಕಟ್ಟಿನ ನಡುವೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬೆಳ್ಳಿಗೆರಿ ಮೂಡಿಸಿದಂತೆ ಆಗಿದೆ. ಸಾರ್ವಜನಿಕರು ರಿಯಲ್ ಎಸ್ಟೇಟ್ನಲ್ಲಿ ಸುರಕ್ಷಿತವಾಗಿ ಹೂಡಿಕೆಯನ್ನು ಮುಂದುವರೆಸಲು ಇದು ಸಹಕಾರಿಯಾಗಲಿದೆ. ಗೃಹ ಸಾಲ ಅಗ್ಗವಾಗಲಿದೆ ಎಂದು ರಾಮ್ ರಾಹೇಜ್ ಹೇಳಿದ್ದಾರೆ.
ಏನಿದು ಲೋನ್ ಟು ವ್ಯಾಲ್ಯು ಅನುಪಾತ? ಲೋನ್ ಟು ವ್ಯಾಲ್ಯು ಅನುಪಾತ ಎಂದರೆ ಗ್ರಾಹಕರು ಮಾಡುವ ಸಾಲ ಮತ್ತು ಖರೀದಿಸುವ ಆಸ್ತಿಯ ಮೌಲ್ಯಕ್ಕೆ ಹೋಲಿಸುವ ಆರ್ಥಿಕ ಅನುಪಾತವಾಗಿದೆ.