ನವದೆಹಲಿ: ನಾಗಾಲ್ಯಾಂಡ್ನಲ್ಲಿ ಭದ್ರತಾ ಪಡೆಗಳು 13 ನಾಗರಿಕರನ್ನು ಭಯೋತ್ಪಾದಕರು ಎಂದು ಭಾವಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಸತ್ನಲ್ಲಿ ಮಾಹಿತಿ ನೀಡಿದರು. ಶೂನ್ಯವೇಳೆಯಲ್ಲಿ ಮಾತನಾಡಿರುವ ಅವರು, ನಾಗರಿಕರ ಸಾವಿಗೆ ಕೇಂದ್ರ ಸರ್ಕಾರ ವಿಷಾದ ವ್ಯಕ್ತಪಡಿಸಿದ್ದು, ಉಗ್ರರೆಂದು ತಪ್ಪಾಗಿ ಗುರುತಿಸಿ ಈ ಘಟನೆ ನಡೆದಿದೆ ಎಂದರು.
ಭವಿಷ್ಯದಲ್ಲಿ ಇಂತಹ ಯಾವುದೇ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಎಲ್ಲ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದ್ದು, ಈ ದುರದೃಷ್ಟಕರ ಘಟನೆ ಬಗ್ಗೆ ಕೇಂದ್ರ ಸರ್ಕಾರ ವಿಷಾದ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
ಸಂಸತ್ನಲ್ಲಿ ಅಮಿತ್ ಶಾ ಹೇಳಿದ್ದು
ಡಿಸೆಂಬರ್ 4ರಂದು ಆ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ 21 ಕಮಾಂಡೋಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಇದೇ ವೇಳೆ, ಸ್ಥಳಕ್ಕೆ ವಾಹನವೊಂದು ಬಂದಿದ್ದು, ನಿಲ್ಲುವಂತೆ ಸೂಚನೆ ನೀಡಲಾಗಿತ್ತು. ಆದರೆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದರಿಂದ ಉಗ್ರರು ಇರಬಹುದು ಎಂಬ ಶಂಕೆಯ ಮೇರೆಗೆ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆಂದು ಗೃಹ ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿರಿ: ಭಾರತೀಯ ಸೇನೆಯಲ್ಲಿ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ.. ರಾಜ್ಯಸಭೆಯಲ್ಲಿ ಕೇಂದ್ರದ ಮಾಹಿತಿ
ವಾಹನದಲ್ಲಿದ್ದ ಎಂಟು ಜನರ ಪೈಕಿ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ತಪ್ಪಾದ ಗುರುತು ಎಂದು ಕಂಡುಬಂದಿದ್ದು, ಗಾಯಗೊಂಡಿರುವ ಇಬ್ಬರನ್ನ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಪ್ರಕರಣದ ಸುದ್ದಿ ತಿಳಿದ 250ಕ್ಕೂ ಗ್ರಾಮಸ್ಥರು ಸೇನಾ ಘಟಕವನ್ನು ಸುತ್ತುವರಿದು ಅಲ್ಲಿನ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ದಾಳಿ ನಡೆಸಿದರು.
ಈ ವೇಳೆ ಓರ್ವ ಯೋಧ ಸಾವನ್ನಪ್ಪಿದ್ದು, ಕೆಲ ಯೋಧರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರುವ ಉದ್ದೇಶದಿಂದ ಸೇನೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮತ್ತೆ ಏಳು 7 ನಾಗರಿಕರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾಗಿ ಮಾಹಿತಿ ನೀಡಿದರು.
ಪ್ರಕರಣವನ್ನ ಈಗಾಗಲೇ ಎಸ್ಐಟಿಗೆ ನೀಡಲಾಗಿದ್ದು, ಮುಂದಿನ 30 ದಿನದೊಳಗೆ ಸಂಪೂರ್ಣ ತನಿಖಾ ವರದಿ ಒಪ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದಿರುವ ಗೃಹ ಸಚಿವರು, ಸ್ಥಳದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂಬ ಮಾಹಿತಿ ನೀಡಿದರು.