ಕಿಶ್ತ್ವಾರ್(ಜಮ್ಮು ಕಾಶ್ಮೀರ): ಕೆಲವೇ ದಿನಗಳ ಹಿಂದೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರ್ಪಡೆಯಾಗಿದ್ದ ಭಯೋತ್ಪಾದಕನನ್ನು ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿದ್ದು, ಕಿಶ್ತ್ವಾರ್ ಜಿಲ್ಲೆಯ ಪಟಿಮಹಲ್ಲಾ ಪಲ್ಮಾರ್ನಲ್ಲಿ 17ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ 52ನೇ ಬೆಟಾಲಿಯನ್ ಯೋಧರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
![Hizbul Mujahideen terrorist arrested from Jammu and Kashmir's Kishtwar](https://etvbharatimages.akamaized.net/etvbharat/prod-images/12767409_446_12767409_1628903715086.png)
ಭಯೋತ್ಪಾದಕನಿಂದ 30 ಗುಂಡುಗಳು, ಒಂದು ಗ್ರೆನೇಡ್ ಮತ್ತು ರೈಫಲ್ ಮ್ಯಾಗಜಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಿಚಾರಣೆ ತೀವ್ರಗೊಳಿಸಲಾಗಿದೆ.
ಬಂಧಿತನನ್ನು ಮೀರ್ನಾ ಪಟಿಮಹಲ್ಲಾ ಪಲ್ಮಾರ್ನ ನಿವಾಸಿ ಮುಜಾಮಿಲ್ ಹುಸೈನ್ ಶಾ ಎಂದು ಗುರುತಿಸಲಾಗಿದೆ. ಕೆಲವೇ ದಿನಗಳ ಹಿಂದೆ ಈತ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದು, ಜಮ್ಮು ಕಾಶ್ಮೀರದ ದಚ್ಚನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ದೋಡಾ ಜಿಲ್ಲೆಯ ಸರೋಲಾ ಅರಣ್ಯದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.