ನಳಂದ(ಬಿಹಾರ): ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವೂ ವಾಸವಿಲ್ಲ. ಆದರೂ ಮಸೀದಿ ಇದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಇಲ್ಲಿ ವಾಸವಾಗಿರುವ ಹಿಂದೂ ಕುಟುಂಬದವರೇ ನೋಡಿಕೊಳ್ಳುತ್ತಿದ್ದು, ಭಾವೈಕ್ಯತೆಯ ಸಮಾಜಕ್ಕೊಂದು ಉದಾಹರಣೆಯಾಗಿದೆ. ಬಿಹಾರದ ನಳಂದ ಜಿಲ್ಲೆಯ ಮಾರಿ ಗ್ರಾಮದಲ್ಲಿ ಈ ಅಪರೂಪದ ದೃಶ್ಯ ನೋಡಲು ಸಿಗುತ್ತದೆ.
ಬಿಹಾರದ ನಳಂದ ಜಿಲ್ಲೆಯ ಗ್ರಾಮವೊಂದರಲ್ಲಿ ಯಾವುದೇ ಮುಸ್ಲಿಂ ಕುಟುಂಬ ವಾಸವಾಗಿಲ್ಲ. ಆದರೂ, ಇಲ್ಲಿರುವ ಮಸೀದಿಯಲ್ಲಿ ಪ್ರತಿದಿನ ಐದು ಸಲ ಪ್ರಾರ್ಥನೆ ಮಾಡಲಾಗ್ತಿದ್ದು, ಆಜಾನ್ ಕೂಗಲಾಗುತ್ತದೆ. ವಿಶೇಷವೆಂದರೆ, ಈ ಎಲ್ಲ ಕೆಲಸವನ್ನು ಹಿಂದೂ ಸಮುದಾಯದವರೇ ಮಾಡುತ್ತಿದ್ದಾರೆ. ಮಸೀದಿಗೆ ಬಣ್ಣ ಬಳಿಯುವ ಕೆಲಸವೂ ಹಿಂದುಗಳಿಂದಲೇ ನಡೆಯುತ್ತದೆ. ಪ್ರತಿದಿನ ಮಸೀದಿ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಗೌತಮ್ ಪ್ರಸಾದ್, ಅಜಯ್ ಪಾಸ್ವಾನ್ ಹೊತ್ತುಕೊಂಡಿದ್ದು, ಪೆನ್ಡ್ರೈವ್ನಿಂದ ಆಜಾನ್ ನುಡಿಸಲಾಗುತ್ತದೆ.
ಇದನ್ನೂ ಓದಿ: 'ಗೊಂದಲ ನಿವಾರಿಸಿದ್ದಕ್ಕೆ ಥ್ಯಾಂಕ್ಸ್': ಸುದೀಪ್ಗೆ ಧನ್ಯವಾದ ಹೇಳಿದ ಅಜಯ್ ದೇವಗನ್
ಗ್ರಾಮದಲ್ಲಿ ನಡೆಯುವ ಯಾವುದೇ ಶುಭ ಕಾರ್ಯ ಪ್ರಾರಂಭ ಮಾಡುವುದಕ್ಕೂ ಮುಂಚಿತವಾಗಿ ಜನರು ಇಲ್ಲಿಗೆ ಬರುತ್ತಾರೆ. ಮದುವೆಯ ಸಂದರ್ಭದಲ್ಲೂ ಹಿಂದೂ ದೇಗುಲಗಳಿಗೆ ಭೇಟಿ ನೀಡುವಂತೆ, ಇಲ್ಲಿಗೂ ಬರುತ್ತಾರೆ. ಅನೇಕ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿ ಯಾರಿಗಾದ್ರೂ ಕೆನ್ನೆ ಮೇಲೆ ಕಾಯಿಲೆ ಆದರೆ, ಈ ಮಸೀದಿಯಲ್ಲಿ ಇಟ್ಟಿರುವ ಕಲ್ಲು ಅಂಟಿಸಿದರೆ ವಾಸಿಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಮಸೀದಿಯ ಹತ್ತಿರ ಒಂದು ಗೋರಿ ಇದೆ. ಅದರ ನಿರ್ವಹಣೆ ಕೂಡ ಹಿಂದೂಗಳಿಂದಲೇ ನಡೆಯುತ್ತಿದೆ.
ಈ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಈ ಹಿಂದೆ ಮುಸ್ಲಿಂ ಕುಟುಂಬಗಳು ವಾಸ ಮಾಡಿದ್ದವು. ಆದರೆ, ಕ್ರಮೇಣವಾಗಿ ಬೇರೆ ಕಡೆ ವಲಸೆ ಹೋಗಿದ್ದರಿಂದ ಮಸೀದಿ ಮಾತ್ರ ಉಳಿದುಕೊಂಡಿದೆ. 1981ರಿಂದಲೂ ಹಿಂದೂಗಳು ಇದರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಗ್ರಾಮದಲ್ಲಿರುವ ಮಸೀದಿ ಸುಮಾರು 200-250 ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು ಯಾವಾಗ ಮತ್ತು ಯಾರು ನಿರ್ಮಾಣ ಮಾಡಿದ್ರು ಎಂಬುದರ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಪುರಾವೆಗಳಿಲ್ಲ.