ಉತ್ತರ 24 ಪರಗಣ(ಪಶ್ಚಿಮಬಂಗಾಳ): ಕೋಮು ಸೌಹಾರ್ದತೆಗೆ ಸಾಕ್ಷಿಯಾಗುವ ಹೊಸ ಉದಾಹರಣೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ದೊರೆತಿದೆ. ಇಲ್ಲಿನ ಬಸರತ್ ಪ್ರದೇಶದಲ್ಲಿರುವ ಮಸೀದಿಯನ್ನು ಹಿಂದೂ ಧರ್ಮೀಯ ಕುಟುಂಬ ಸುಮಾರು 50 ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದೆ.
ಉತ್ತರ 24 ಪರಗಣದ ಬರಾಸತ್ ನಿವಾಸಿ ದೀಪಕ್ ಕುಮಾರ್ ಬೋಸ್ ಮತ್ತು ಅವರ ಪುತ್ರ ಪಾರ್ಥ ಸಾರಥಿ ಬೋಸ್ ಅವರು ಅಮಾನತಿ ಹೆಸರಿನ ಮಸೀದಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ.
ದೀಪಕ್ ಕುಮಾರ್ ಬೋಸ್ ಕುಟುಂಬ ಇತ್ತೀಚೆಗೆ ಮಸೀದಿ ನವೀಕರಿಸಿದೆ. ಪ್ರತಿದಿನ ಮಸೀದಿಗೆ ಭೇಟಿ ನೀಡುವ ಅವರು ಮುಸ್ಲಿಂ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸಲು ತೊಡಕಾಗದಂತೆ ನೋಡಿಕೊಳ್ಳುತ್ತಾರೆ. ತಾವೇ ಮಸೀದಿಯನ್ನು ಸ್ವಚ್ಛಗೊಳಿಸುತ್ತಾರೆ. ಈ ಮಸೀದಿಯು ಹಿಂದೂಗಳ ಪ್ರಾಬಲ್ಯವಿರುವ ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ನಾಬೋಪಲ್ಲಿ ಪ್ರದೇಶದಲ್ಲಿದೆ.
ಸ್ವಾತಂತ್ರ್ಯಾಪೂರ್ವದಲ್ಲಿ ಬೋಸ್ ಕುಟುಂಬ ಬಾಂಗ್ಲಾದೇಶದಲ್ಲಿತ್ತು. ಆ ನಂತರ ಭಾರತಕ್ಕೆ ವಲಸೆ ಬಂದು ಬಾಂಗ್ಲಾದ ಆಸ್ತಿಯನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭೂಮಿಯೊಂದಿಗೆ ವಿನಿಮಯ ಮಾಡಿಕೊಂಡಿತು. ಆಗಲೇ ಆ ಭೂಮಿಯಲ್ಲಿ ಮಸೀದಿಯಿತ್ತು. ಅನೇಕರು ಮಸೀದಿಯನ್ನು ತೆರವುಗೊಳಿಸಲು ಸಲಹೆ ನೀಡಿದರೂ, ಹಿಂದೂ ಕುಟುಂಬವು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದೀಪಕ್ ಕುಮಾರ್ ಬೋಸ್, 'ವಿವಿಧ ಪ್ರದೇಶಗಳಿಂದ ಮುಸ್ಲಿಮರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆಜಾನ್‌ಗೆ ಇಮಾಮ್ ನೇಮಿಸಿದ್ದೇವೆ. ದಶಕಗಳಿಂದ ನಾವು ಈ ಮಸೀದಿಯನ್ನು ನಿರ್ವಹಿಸುತ್ತಿದ್ದೇವೆ' ಎಂದರು.
ಇದನ್ನೂ ಓದಿ: ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್ಎಸ್ಎಸ್ ಕೈವಾಡವಿದೆ: ವೀರಪ್ಪ ಮೊಯ್ಲಿ
'ಹಿಂದೂಗಳು ಮಸೀದಿಯನ್ನು ನೋಡಿಕೊಳ್ಳುವುದನ್ನು ಯಾರೂ ವಿರೋಧಿಸಿಲ್ಲ. ನಾವು ವರ್ಷಗಳಿಂದ ಮಸೀದಿಯನ್ನು ನೋಡಿಕೊಳ್ಳುತ್ತಿದ್ದೇವೆ. ವಾಸ್ತವವಾಗಿ 2 ಕಿಲೋಮೀಟರ್ ದೂರದವರೆಗೆ ಯಾವುದೇ ಮಸೀದಿಯಿಲ್ಲ. ಆದ್ದರಿಂದ ಮುಸ್ಲಿಮರು ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುತ್ತಾರೆ' ಎಂದು ದೀಪಕ್ ಅವರ ಪುತ್ರ ಪಾರ್ಥ ಸಾರಥಿ ಬೋಸ್ ಹೇಳಿದ್ದಾರೆ.
ಇಲ್ಲಿಯ ಮಸೀದಿಯ ಇಮಾಮ್ ಸರಾಫತ್ ಅಲಿ ಮಾತನಾಡಿ, 'ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿ ನನಗೆ ಯಾವುದೇ ಬೆದರಿಕೆ ಬಂದಿಲ್ಲ. 1992ರಿಂದ ಆಜಾನ್‌ಗೆ ಬರುವಂತೆ ಜನರನ್ನು ಕೇಳುತ್ತಿದ್ದೇನೆ. ನಾವು ಏಕತೆ ಮತ್ತು ಶಾಂತಿಯನ್ನು ನಂಬುತ್ತೇವೆ' ಎಂದು ಹೇಳಿದರು.