ನ್ಯೂಯಾರ್ಕ್: ಅದಾನಿ ಗ್ರೂಪ್ ಮತ್ತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನಬರ್ಗ್ ಮಧ್ಯೆ ಆರೋಪ- ಪ್ರತ್ಯಾರೋಪ ಮುಂದುವರಿದಿದೆ. ತನ್ನ ವರದಿಗೆ ಪ್ರತಿಯಾಗಿ ಅದಾನಿ ಗ್ರೂಪ್ ನೀಡಿದ್ದ 413 ಪುಟಗಳ ಉತ್ತರಕ್ಕೆ ತಿರುಗೇಟು ನೀಡಿರುವ ಹಿಂಡನ್ಬರ್ಗ್ ಸಂಸ್ಥೆ, "ಭಾರತವನ್ನು ವ್ಯವಸ್ಥಿತವಾಗಿ ಅದಾನಿ ಗ್ರೂಪ್ ಲೂಟಿ ಮಾಡುತ್ತಿದೆ" ಎಂದು ಮತ್ತೊಂದು ಗಂಭೀರ ಆರೋಪ ಮಾಡಿದೆ. ತಾನು ಮಾಡಿರುವ ಎಲ್ಲ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆಯೇ ಹೊರತು ತನ್ನ ಉತ್ತರದಲ್ಲಿ ನಿಖರತೆ ನೀಡಿಲ್ಲ. ಭಾರತದ ಮೇಲಿನ ದಾಳಿಗೆ ಇದು ಸಮನಾಗಿದೆ ಎಂದಿರುವುದು ಖಂಡನೀಯ. ಯಾರೇ ವಂಚನೆ ಮಾಡಿದರೂ ಅದನ್ನು ಮುಚ್ಚಿ ಹಾಕಲಾಗದು ಎಂದು ಹಿಂಡೆನ್‌ಬರ್ಗ್ ಹೇಳಿದೆ.
ಭಾರತದ ಯಶಸ್ಸನ್ನು ಅದಾನಿ ಗ್ರೂಪ್ ಬಳಕೆ ಮಾಡಿಕೊಂಡು ತನ್ನ ಸಂಪತ್ತನ್ನು ಹೆಚ್ಚಿಸಿಕೊಂಡಿದೆ. ಬ್ಲ್ಯಾಟಂಟ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಮಾಡಿರುವುದು ನಿಜವಾಗಿದೆ. ಅದನ್ನು ಮುಚ್ಚಿಹಾಕಲು 413 ಪುಟಗಳ ಉತ್ತರ ಬಿಡುಗಡೆ ಮಾಡಿದೆ. ಅದರಲ್ಲಿ 53 ಪುಟಗಳು ಉನ್ನತ ಮಟ್ಟದ ಹಣಕಾಸು, ಸಾಮಾನ್ಯ ಮಾಹಿತಿ ಮತ್ತು ಅಪ್ರಸ್ತು ಕಾರ್ಪೋರೇಟ್ ನಿಯಮಗಳನ್ನೇ ಪ್ರಸ್ತಾಪಿಸಲಾಗಿದೆ. ಅಲ್ಲದೇ, ನಮ್ಮ 88 ಪ್ರಶ್ನೆಗಳಲ್ಲಿ 62 ಕ್ಕೆ ಸ್ಪಷ್ಟ ಉತ್ತರ ನೀಡುವಲ್ಲಿ ಸಂಸ್ಥೆ ವಿಫಲವಾಗಿದೆ ಎಂದು ಹಿಂಡೆನ್‌ಬರ್ಗ್ ಹೇಳಿದೆ.
ಭಾರತವು ಅದ್ಭುತ ಪ್ರಜಾಪ್ರಭುತ್ವ ಮತ್ತು ಉದಯೋನ್ಮುಖ ಸೂಪರ್ ಪವರ್ ಆಗಿ ಬೆಳೆಯುತ್ತಿದೆ. ಈ ಯಶಸ್ಸನ್ನೇ ಬಳಸಿಕೊಂಡು ಗ್ರೂಪ್ ವ್ಯವಸ್ಥಿತವಾಗಿ ರಾಷ್ಟ್ರವನ್ನು ಲೂಟಿ ಮಾಡುತ್ತಿದೆ. ಅದಾನಿ ಗ್ರೂಪ್‌ನಿಂದ ಭಾರತದ ಭವಿಷ್ಯಕ್ಕೆ ತೊಡಕಾಗಲಿದೆ. ವಂಚನೆಯನ್ನು ಯಾರೇ ಮಾಡಿದ್ದರೂ ಅದು ತಪ್ಪೇ. ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮಾಡಿದರೂ ಸಹ ಅದು ಮೋಸವೇ ಎಂದು ಅದು ಹೇಳಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ವರದಿ: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್ ಬ್ಲ್ಯಾಟಂಟ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಈ ಆರೋಪದ ವರದಿಯ ನಂತರ, ಹಲವು ವ್ಯಾಪಾರ ಸಮೂಹದ ಕಂಪನಿಗಳ ಷೇರುಗಳಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡುಬಂದಿದೆ.
ಅದಾನಿ ಸಂಸ್ಥೆಯ 413 ಪುಟಗಳ ಉತ್ತರ: ಹಿಂಡನ್ಬರ್ಗ್ ವರದಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಆದಾನಿ ಮಾಲಿಕತ್ವದ ಅದಾನಿ ಸಮೂಹ, "ಇದು ಕೇವಲ ಕಂಪನಿಯೊಂದರ ಮೇಲಿನ ದಾಳಿಯಲ್ಲ, ದೇಶದ ಮೇಲಿನ ಯೋಜಿತ ದಾಳಿʼʼ ಎಂದಿದೆ. 88 ಪ್ರಶ್ನೆಗಳಲ್ಲಿ 62 ಪ್ರಶ್ನೆಗಳಿಗೆ ಉತ್ತರ ನೀಡಲು ಅದಾನಿ ಗ್ರೂಪ್ ವಿಫಲವಾಗಿದೆ ಎಂದು ಹಿಂಡೆನ್‌ಬರ್ಗ್ ತಿಳಿಸಿತ್ತು. ಇದಕ್ಕೆ ಉತ್ತರ ರೂಪವಾಗಿ 413 ಪುಟಗಳ ದಾಖಲೆಯನ್ನು ಅದಾನಿ ಗ್ರೂಪ್ ಬಿಡುಗಡೆ ಮಾಡಿತ್ತು.
ಇದಾದ ಬಳಿಕವೂ ಸಮೂಹದ ಹಲವು ಸಂಸ್ಥೆಗಳು ನಷ್ಟದಲ್ಲಿ ಸಾಗಿದರೆ, ಇನ್ನು ಕೆಲವು ತುಸು ಚೇತರಿಕೆ ಕಂಡಿವೆ. ಅದಾನಿ ಗ್ರೀನ್, ಅದಾನಿ ಟೋಟಲ್ ಗ್ಯಾಸ್ ಷೇರುಗಳು ಕೂಡ ಶೇ.20ರಷ್ಟು ಇಳಿಕೆ ಕಂಡಿದ್ದರೆ, ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಏರಿಕೆ ದಾಖಲಿಸಿವೆ.
ಓದಿ: ಹಿಂಡನ್ಬರ್ಗ್ ವರದಿ ಎಫೆಕ್ಟ್: ಅದಾನಿ ಎಂಟರ್ಪ್ರೈಸೆಸ್, ಪೋರ್ಟ್ಸ್ ತುಸು ಚೇತರಿಕೆ