ಗುವಾಹಟಿ: ಅಸ್ಸೋಂನ ನೂತನ ಹಾಗೂ 21ನೇ ಮುಖ್ಯಮಂತ್ರಿಯಾಗಿ ಇಂದು ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಸ್ಸೋಂನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ಕೊನೆಗೂ ನಿನ್ನೆ ತೆರೆ ಬಿದ್ದಿತ್ತು. ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಈವರೆಗೆ ಅಸ್ಸೋಂ ಸಿಎಂ ಆಗಿದ್ದ ಸರ್ಬಾನಂದ ಸೊನೊವಾಲ್ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ನಾರದ ಸ್ಟಿಂಗ್ ಕೇಸ್: ಟಿಎಂಸಿ ನಾಯಕರ ಮೇಲೆ ಸಿಬಿಐ ಕಾನೂನು ಕ್ರಮ ಜರುಗಿಸಲು ಬಂಗಾಳ ಗವರ್ನರ್ ಅನುಮತಿ
2015ರವರೆಗೂ ಕಾಂಗ್ರೆಸ್ನಲ್ಲಿದ್ದ ಹಿಮಂತ ಬಿಸ್ವಾ, ಅಸ್ಸೋಂನಲ್ಲಿ ಕಾಂಗ್ರೆಸ್ನ ತರುಣ್ ಗೊಗೊಯ್ ಸರ್ಕಾರವಿದ್ದಾಗ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ಸರ್ಬಾನಂದ ಸೊನೊವಾಲ್ ಸರ್ಕಾರದಲ್ಲಿ ಆರೋಗ್ಯ, ವಿತ್ತ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಬಿಸ್ವಾ ಶರ್ಮಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 12 ಸಚಿವರು ಕೂಡ ಮೊದಲ ಹಂತದಲ್ಲಿಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.