ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆಯ ಪಿಂಚಣಿ ಮರು ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿದೆ. ಶೀಘ್ರವೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದರಿಂದ 1.36 ಲಕ್ಷಕ್ಕೂ ಅಧಿಕ ಜನರು ಹಳೆಯ ಪಿಂಚಣಿ ವ್ಯವಸ್ಥೆಗೆ ಒಳಪಡಲಿದ್ದಾರೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ತನ್ನ ಮೊದಲ ಸಚಿವ ಸಂಪುಟದಲ್ಲಿ 1.36 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ. ಶುಕ್ರವಾರದಿಂದಲೇ ಒಪಿಎಸ್ ಪ್ರಯೋಜನವನ್ನು ನೀಡಲಾಗುವುದು. ಈ ಸಂಬಂಧ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಒಂದು ಲಕ್ಷ ಉದ್ಯೋಗಾವಕಾಶ, 18 ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ 1500 ರೂಪಾಯಿ ನೀಡುವ ಭರವಸೆಗಳ ಅನುಷ್ಠಾನಕ್ಕೆ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗುವುದು. ಹಳೆಯ ಪಿಂಚಣಿ ಯೋಜನೆಯ ಜಾರಿಗೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಈ ವರ್ಷ ಒಪಿಎಸ್ ಜಾರಿಯಿಂದ ಸುಮಾರು 800 ರಿಂದ 900 ಕೋಟಿ ರೂಪಾಯಿ ಸರ್ಕಾರಕ್ಕೆ ಹೊರೆಯಾಗಲಿದೆ. ಇದನ್ನು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) 3 ರೂಪಾಯು ಹೆಚ್ಚಳ ಮಾಡಿ ಸಂಪನ್ಮೂಲ ಸಂಗ್ರಹಿಸಿ ಭರಿಸಲಾಗುವುದು. ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆಯನ್ನು ನೀಡಲು ಮತ್ತು ನೌಕರರ ಸ್ವಾಭಿಮಾನವನ್ನು ಕಾಪಾಡಲು ಓಪಿಎಸ್ ಪುನಃಸ್ಥಾಪಿಸಿದೆ ಎಂದು ಸುಖು ಹೇಳಿದರು.
ಒಪಿಎಸ್ ಜಾರಿಗೆ ಆಳವಾಗಿ ಅಧ್ಯಯನ ಮಾಡಲಾಗಿದೆ. ಹಣಕಾಸು ಅಧಿಕಾರಿಗಳು ಕೆಲವು ಮೀಸಲಾತಿಗಳ ಹೊರತಾಗಿಯೂ, ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ. ಎನ್‌ಪಿಎಸ್ ಅಡಿಯಲ್ಲಿರುವ ಎಲ್ಲಾ ಉದ್ಯೋಗಿಗಳನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸಲಾಗುವುದು. ಹಿಂದಿನ ಬಿಜೆಪಿ ಸರ್ಕಾರ ನೌಕರರಿಗೆ 4,430 ಕೋಟಿ ರೂ., ಪಿಂಚಣಿದಾರರಿಗೆ 5,226 ಕೋಟಿ ರೂ., ಆರನೇ ವೇತನ ಆಯೋಗದ 1,000 ಕೋಟಿ ರೂ. ತುಟ್ಟಿಭತ್ಯೆ ಸೇರಿದಂತೆ ಅಂದಾಜು 11,000 ಕೋಟಿ ಬಾಕಿ ಉಳಿಸಿಕೊಂಡಿದೆ. ನಮ್ಮ ಸರ್ಕಾರ ಇದನ್ನು ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಸಿಎಂ ಸುಖು ಹೇಳಿದರು.
ಬಿಜೆಪಿ ವಿರುದ್ಧ ಟೀಕೆ: ಹಿಂದಿನ ಬಿಜೆಪಿ ಸರ್ಕಾರ ದುಂದುವೆಚ್ಚದಿಂದಾಗಿ ರಾಜ್ಯವು 75,000 ಕೋಟಿ ರೂಪಾಯಿ ಸಾಲದಲ್ಲಿದೆ. ಬಜೆಟ್ ನೀಡದೇ ತೆರೆಯಲಾದ 900 ಕ್ಕೂ ಹೆಚ್ಚು ಸಂಸ್ಥೆಗಳ ಕಾರ್ಯಾರಂಭಕ್ಕೆ 5,000 ಕೋಟಿ ರೂಪಾಯಿಗಳ ಅಗತ್ಯವಿದ್ದ ಕಾರಣ, ಎಲ್ಲ ಸಂಸ್ಥೆಗಳನ್ನು ಸರ್ಕಾರ ಡಿ ನೋಟಿಫೈ ಮಾಡಿದೆ. ಹೆಚ್ಚಿನ ಸಾಲದ ಭಾರದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲದ ಕಾರಣ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
2004 ರ ಜನವರಿ 1 ರಿಂದ ಸರ್ಕಾರಿ ಸೇವೆಗೆ ಸೇರಿದ ಉದ್ಯೋಗಿಗಳು ಎನ್ಪಿಸ್ ವ್ಯಾಪ್ತಿಗೆ ಒಳಪಡುತ್ತಾರೆ. ಇದರಲ್ಲಿ ಸರ್ಕಾರ ಮತ್ತು ಉದ್ಯೋಗಿಗಳು ಕ್ರಮವಾಗಿ ತಮ್ಮ ಸಂಬಳದ 10 ಮತ್ತು 14 ಪ್ರತಿಶತವನ್ನು ಪಿಂಚಣಿ ನಿಧಿಯಾಗಿ ಪಡೆಯುತ್ತಾರೆ. ಆದರೆ, ಹಳೆಯ ಪಿಂಚಣಿ ಯೋಜನೆಯಲ್ಲಿ 20 ವರ್ಷಗಳ ಸೇವೆಯನ್ನು ಹೊಂದಿರುವ ಉದ್ಯೋಗಿಗಳು ಕೊನೆಯ ಶೇಕಡಾ 50 ರಷ್ಟು ಪಡೆಯುತ್ತಾರೆ. ಹೀಗಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದರು.
ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ಅಂತೆಯೇ ಈಗಾಗಲೇ ಪಂಜಾಬ್ ಸಚಿವ ಸಂಪುಟ ಕೂಡ ಹಳೆಯ ಪಿಂಚಣಿ ಯೋಜನೆ ಜಾರಿಗೆ ಅನುಮೋದನೆ ನೀಡಿದೆ. ಸದ್ಯ ಹಿಮಾಚಲಪ್ರದೇಶ ಸರ್ಕಾರ ಓಪಿಎಸ್ ಜಾರಿಗೆ ಒಪ್ಪಿಗೆ ನೀಡಿದೆ.
ಓದಿ: ಶಬರಿಮಲೆಯಲ್ಲಿ ಇಂದು ಸಂಜೆ ಮಕರಜ್ಯೋತಿ ದರ್ಶನ... ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಭಕ್ತ ಸಾಗರ