ಲಾಹೌಲ್ ಮತ್ತು ಸ್ಪಿಟಿ (ಹಿಮಾಚಲ ಪ್ರದೇಶ): ಕುದುರೆ, ಹೋರಿ ಸೇರಿದಂತೆ ಸಾಕು ಪ್ರಾಣಿಗಳಿಗೆ ಆಗಾಗ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಮ್ಮಲ್ಲಿ ರೂಢಿಯಿದೆ. ಇದೀಗ ಭೂಮಿಯ ಮೇಲಿನ ಸ್ವರ್ಗದಂತಿರುವ ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿಯಲ್ಲಿರುವ ಸಿಸ್ಸು ಎಂಬಲ್ಲಿ 'ಸ್ನೋ ಡಾಗ್ ರೇಸ್' ಎಂಬ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತದ ಮೊದಲ ಸ್ನೋ ಡಾಗ್ ರೇಸ್ನ ಎರಡನೇ ಆವೃತ್ತಿಯಾದ ಸ್ನೋ ಮ್ಯಾರಥಾನ್ ಬರುವ ಮಾರ್ಚ್ 12 ರಂದು ನಡೆಯಲಿದೆ. ಈ ಉದ್ದೇಶಕ್ಕಾಗಿಯೇ ವಿಶೇಷವಾದ ಸ್ನೋ ಟ್ರ್ಯಾಕ್ ಸೆಟಪ್ ಮಾಡಲಾಗಿದ್ದು, ಇಲ್ಲಿಯೇ ರೇಸ್ ನಡೆಯಲಿದೆ.
ಸ್ನೋ ಡಾಗ್ ರೇಸ್ ಕುರಿತು ಮಾಹಿತಿ ನೀಡಿದ 'ಸ್ನೋ ಟೇಲ್ಸ್' ನ ಸಂಸ್ಥಾಪಕ ಗೌರವ್ ಸ್ಕಿಮರ್ , ' ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಯಿಗಳು ತಮ್ಮ ಮಾಲೀಕರೊಂದಿಗೆ ಹಿಮದ ನಡುವೆ ಓಡಲಿವೆ. ಒಂದು ಕಿಲೋ ಮೀಟರ್ ಓಡುವಂತೆ ಸ್ಪರ್ಧೆ ಆಯೋಜಿಸಲಾಗಿದೆ. ಶ್ವಾನ ಪ್ರೇಮಿಗಳು ನಿಮ್ಮ ನಾಯಿಯೊಂದಿಗೆ ಉತ್ತಮ ಪ್ರದರ್ಶನ ನೀಡಬಹುದು,ಅದ್ಭುತ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಿ. ಶ್ವಾನಗಳು ಹಿಮದ ಶಿಖರ ಏರುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಕಾರ್‌ಗೆ ಡಿಕ್ಕಿಯಾಗಿ ಬಂಪರ್ ಸೇರಿಕೊಂಡ ನಾಯಿ; 70 ಕಿ.ಮೀ ಪಯಣ!
"ದೇಶದ ಪ್ರಜೆಗಳಾಗಿ ಪ್ರಾಣಿಗಳನ್ನು ನೋಡಿಕೊಳ್ಳುವುದು ಮತ್ತು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಹಿಮಾಲಯ ಪ್ರದೇಶದಲ್ಲಿ ಅನೇಕ ಕಾರಣಗಳಿಂದ ಪ್ರಾಣಿಗಳು ಸಂಕಟ ಅನುಭವಿಸುತ್ತಿರುವುದನ್ನು ಕಾಣಬಹುದು. ಮನಾಲಿ ಸ್ಟ್ರೇಸ್ ಸಹಭಾಗಿತ್ವದಲ್ಲಿ ನಾವು ಪ್ರಾಣಿಗಳ ಕಲ್ಯಾಣದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮನಾಲಿ ಸ್ಟ್ರೇಸ್ ದೇಣಿಗೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರಾಣಿಗಳನ್ನು ರಕ್ಷಿಸುವ ಕಾಯಕದಲ್ಲಿ ನಿರತವಾಗಿದೆ. ಅಷ್ಟೇ ಅಲ್ಲದೆ, ಗಾಯಗೊಂಡ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಆಗಾಗ ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ಆಯೋಜಿಸುತ್ತಾರೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಮರಾಶಿಯಲ್ಲಿ ಚಿರತೆಗಳ ತುಂಟಾಟ- ವಿಡಿಯೋ
ಸ್ನೋ ಟೇಲ್ಸ್‌ನ ಸಹ ಸಂಸ್ಥಾಪಕರಾದ ಡಾ. ಬೇಕೆ ಮತ್ತು ಡಾ. ಕಮಲೇಶ್ ಮಾತನಾಡಿ,' ಇದು ದೇಶದಲ್ಲೇ ಆಯೋಜಿಸಿರುವ ಮೊದಲ ಹಿಮ ನಾಯಿಗಳ ರೇಸ್ ಆಗಿದೆ. ಈ ಕಾರ್ಯಕ್ರಮದ ಮೂಲಕ ಪ್ರಾಣಿಗಳ ಕಲ್ಯಾಣದ ಕುರಿತು ಮಹತ್ವದ ಹೆಜ್ಜೆ ಇಡಲಾಗುವುದು.ಜೊತೆಗೆ, ಜನರಿಗೆ ಪ್ರಾಣಿಗಳ ಕಾಳಜಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಸ್ನೋ ಡಾಗ್ ರೇಸ್ ಅನ್ನು ಸ್ನೋ ಟೈಲ್ಸ್ ಮತ್ತು ಮನಾಲಿ ಸ್ಟ್ರೇಸ್‌ನ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದೆ. ಮನಾಲಿ ಸ್ಟ್ರೇಸ್ ಎಂಬುದು ದಾರಿತಪ್ಪಿದ ಪ್ರಾಣಿಗಳಿಗೆ ಸಹಾಯ ಮಾಡಲು ಹುಟ್ಟುಕೊಂಡಿರುವ ಸ್ವಯಂಸೇವಾ ಸಂಸ್ಥೆಯಾಗಿದೆ' ಎಂದರು.
ಇದನ್ನೂ ಓದಿ: ಗದಗ: ಶೆಟ್ಟಿಕೆರೆಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ