ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ 2013ರಿಂದ 2019ರ ನಡೆದ 250 ಕೋಟಿ ರೂಪಾಯಿ ವಿದ್ಯಾರ್ಥಿವೇತನ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿದೆ. ಮಂಗಳವಾರ ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢ ಸೇರಿದಂತೆ ಹಲವಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ಪ್ರಕರಣದಲ್ಲಿ ಈ ಹಿಂದೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆ ನಡೆಸಿತ್ತು.
2019ರಲ್ಲಿ ಲಾಹೌಲ್‌ನ ಬಿಜೆಪಿ ಶಾಸಕ ಸ್ಪಿತಿ ರಾಮಲಾಲ್ ಮಾರ್ಕಂಡ ಅವರು ತಮ್ಮ ಕ್ಷೇತ್ರದ ಮಕ್ಕಳು ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ ಎಂದು ದೂರಿದ್ದರು. ಇದರ ಮೊದಲ ಬಾರಿಗೆ ವಿದ್ಯಾರ್ಥಿವೇತನ ಹಗರಣ ಬೆಳಕಿಗೆ ಬಂದಿತ್ತು. ಆಗಿನ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಎಂಟು ಚಾರ್ಜ್ ಶೀಟ್‌ಗಳನ್ನೂ ಸಲ್ಲಿಸಿದೆ.
ಇದನ್ನೂ ಓದಿ: ಮಾಜಿ ಜಡ್ಜ್ ಸುಧೀರ್ ಪರ್ಮಾರ್ ಬಂಧನ...ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ತನಿಖೆ
ಸಿಬಿಐ ಮೇ 2019ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಪ್ರಕರಣವು ಇತರ ನೆರೆಯ ರಾಜ್ಯಗಳಿಗೂ ವ್ಯಾಪಿಸಿರುವುದು ಕೂಡ ಪತ್ತೆ ಹಚ್ಚಿತ್ತು. ಅಲ್ಲದೇ, ಸಿಬಿಐ ನಡೆಸಿದ ತನಿಖೆಯ ಪ್ರಕಾರ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢದ 1,176 ಸಂಸ್ಥೆಗಳು ಹಗರಣದಲ್ಲಿ ತಪ್ಪಿತಸ್ಥರಾಗಿದ್ದು, 266 ಖಾಸಗಿ ಸಂಸ್ಥೆಗಳು ಸೇರಿದಂತೆ 28 ಸಂಸ್ಥೆಗಳು ಭಾಗಿಯಾಗಿರುವುದು ದೃಢಪಟ್ಟಿತ್ತು.
ಈ 28 ಸಂಸ್ಥೆಗಳ ಪೈಕಿ 11 ಸಂಸ್ಥೆಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಉಳಿದ 17 ಸಂಸ್ಥೆಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದೆ ಎಂದು ಸಿಬಿಐ ತಿಳಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಈ ಹಗರಣದಲ್ಲಿ ಸಿಬಿಐ ಇದುವರೆಗೆ 10 ಜನರನ್ನು ಬಂಧಿಸಿದೆ. ಇದೀಗ ಜಾರಿ ನಿರ್ದೇಶನಾಲಯ (ಇಡಿ)ವು ಹಣ ವರ್ಗಾವಣೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ತನಿಖೆ ಆರಂಭಿಸಿದೆ.
ಏನಿದು ಸ್ಕಾಲರ್‌ಶಿಪ್ ಹಗರಣ?: 2013ರಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಅಥವಾ ಸ್ಕಾಲರ್ಶಿಪ್ಅನ್ನು ಅರ್ಹ ಫಲಾನುಭವಿಗಳಿಗೆ ಪಾವತಿಸದೇ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಖಾತೆಗೆ ಕನಿಷ್ಠ 250 ಕೋಟಿ ರೂ. ಪಾವತಿಸಿದ್ದು, ಈ ಪೈಕಿ ಸರ್ಕಾರಿ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಕೇವಲ 56 ಕೋಟಿ ರೂ. ಪಾವತಿಸಲಾಗಿದೆ.
ಸ್ಕಾಲರ್‌ಶಿಪ್ ಸಿಗದಿರುವ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಲ್ಲದೇ, ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆಗಳ ವಿದ್ಯಾರ್ಥಿಗಳಿಗೆ 50 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಲಾಹೌಲ್ ಮತ್ತು ಸ್ಪಿತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವೇ ಪಾವತಿಯಾಗದೇ ವಂಚಿಸಲಾಗಿತ್ತು. ಹೀಗಾಗಿ ಸರ್ಕಾರ ತನಿಖೆಗೆ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ವಂಚನೆ.. ನಕಲಿ ಕಂಪನಿಗಳ ಖಾತೆಯಲ್ಲಿದ್ದ 5.87 ಕೋಟಿ ಇಡಿ ಇಲಾಖೆಯಿಂದ ಮುಟ್ಟುಗೋಲು