ನಾಹನ್ (ಹಿಮಾಚಲ ಪ್ರದೇಶ): ಅಕ್ರಮವಾಗಿ ಸಾಗಿಸುತ್ತಿದ್ದ 1.6 ಕೋಟಿ ರೂಪಾಯಿ ಮೌಲ್ಯದ 3.27 ಕೆಜಿ ವಜ್ರ ಮತ್ತು ಚಿನ್ನಾಭರಣಗಳನ್ನು ಸ್ಥಳೀಯ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಬೆಹ್ರಾಲ್ ಚೆಕ್ ಪೋಸ್ಟ್‌ನಲ್ಲಿ ಗುರುವಾರ ತಡರಾತ್ರಿ ಹಿಮಾಚಲ - ಹರಿಯಾಣ ಗಡಿಯಲ್ಲಿ ಕಾರೊಂದನ್ನು ತನಿಖೆ ಮಾಡಿದ ಅಧಿಕಾರಿಗಳು ಚಲನ್ ಪರ್ಮಿಟ್ ಇಲ್ಲದೇ ಆಭರಣಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಚಾಲಕನಿಗೆ 9,35,000 ರೂಪಾಯಿ ದಂಡ ವಿಧಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ಎಲ್ಲ ಚಿನ್ನಾಭರಣಗಳನ್ನು ರಾಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ ಎಂದು ಡಿಎಸ್ಪಿ ರಮಾಕಾಂತ್ ತಿಳಿಸಿದ್ದಾರೆ. ಜಪ್ತಿ ನಂತರ ಪೌಂಟಾ ಸಾಹಿಬ್ ಪೊಲೀಸರು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಾರು ಚಾಲಕನ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಳೆದ 10 ದಿನಗಳಲ್ಲಿ ಪೌಂಟಾ ಸಾಹಿಬ್‌ನ ಗೋವಿಂದಘಾಟ್ ಮತ್ತು ಬೆಹ್ರಾಲ್ ಚೆಕ್ ಪೋಸ್ಟ್‌ಗಳಲ್ಲಿ ಆರಕ್ಕೂ ಹೆಚ್ಚು ಜಪ್ತಿ ಪ್ರಕರಣಗಳಲ್ಲಿ ಪೊಲೀಸರು 30 ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ಹಲವಾರು ಕಣ್ಗಾವಲು ತಂಡಗಳು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ನಿಯೋಜಿಸಲಾಗಿದೆ. ಅಧಿಕಾರಿಗಳು ದಿನದ 24 ಗಂಟೆಯೂ ಎಲ್ಲ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳು ನೆರೆ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿದ್ದಾರೆ. ಮುಂಬರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಹಿಮಾಚಲಕ್ಕೆ ಯಾವುದೇ ಮದ್ಯ, ಹಣ ಅಥವಾ ಮಾದಕ ದ್ರವ್ಯ ಸಾಗಣೆಯಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.