ಚಂಬಾ: ಹಿಮಾಚಲ ಪ್ರದೇಶದ ಯುವತಿಯೋರ್ವಳು ಹಿಮಾಚಲ ಆಡಳಿತ ಸೇವೆಗಳ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾಳೆ. ಆಕೆಯ ಯಶಸ್ಸಿಗೆ ಅವರ ಕುಟುಂಬದ ಕಠಿಣ ಪರಿಶ್ರಮ ಪ್ರಮುಖ ಕಾರಣವಾಗಿದೆ.
ಹೌದು, 26 ವರ್ಷದ ಶಿಖಾ ತಮ್ಮ ಆರಂಭಿಕ ಶಿಕ್ಷಣವನ್ನು ಕಾಕಿರಾದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಿಂದ ಪಡೆದಿದ್ದರು. ಈ ವೇಳೆ ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶಿಖಾ ತಾಯಿ, ಆಕೆ ತುಂಬಾ ಶ್ರಮಜೀವಿ. ಮನೆಯಿಂದ ಬಹಳ ದೂರದಲ್ಲಿರುವ ಶಾಲೆಗೆ ಕಾಲ್ನಡಿಗೆಯಲ್ಲಿಯೇ ಹೋಗಿ ಬರುತ್ತಿದ್ದಳು ಎಂದಿದ್ದಾರೆ.
ಶಾಲಾ ಶಿಕ್ಷಣವನ್ನು ಮುಗಿಸಿದ ಶಿಖಾ, ಚುವಾಡಿ ಕಾಲೇಜಿನಿಂದ ಪದವಿ ಪಡೆದರು. ನಂತರ ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಆಡಳಿತ ಸೇವೆಗಳಿಗೆ ಸಿದ್ಧರಾದರು.
ನಮ್ಮ ತಂದೆಯಂತೆಯೇ ಮಕ್ಕಳಿಗೆ ಶಿಕ್ಷಣ ನೀಡಿ:
ಹೆಣ್ಣು ಮಕ್ಕಳಿಗೆ ಅಧ್ಯಯನಕ್ಕೆ ಪೂರಕವಾದ ಸಂಪೂರ್ಣ ಅವಕಾಶ ಸಿಗಬೇಕು ಎನ್ನುತ್ತಾರೆ ಶಿಖಾ. ತಮ್ಮ ತಂದೆ ಬಗ್ಗೆ ಮಾತನಾಡಿ, ತನ್ನ ತಂದೆ ತನ್ನ ಏಳು ಹೆಣ್ಣು ಮಕ್ಕಳ ಅಧ್ಯಯನಕ್ಕೆ ಅವಕಾಶ ನೀಡಿದಂತೆಯೇ, ಪ್ರತಿಯೊಬ್ಬರೂ ಸಹ ತಮ್ಮ ಮಕ್ಕಳಿಗೆ ಅಧ್ಯಯನ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ತನ್ನ ಹಳ್ಳಿಗೆ ಹಿಂದಿರುಗಿದ ನಂತರ ಶಿಖಾ ಅವರ ತಂದೆ ಹೆಮ್ಮೆಯಿಂದ ಬೆನ್ನು ತಟ್ಟುತ್ತಿದ್ದಂತೆ ಆಕೆಯ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು. ಈ ಭಾವನಾತ್ಮಕ ಸನ್ನಿವೇಶಕ್ಕೆ ಕಾರಣವಾದದ್ದು ಆಕೆಯ ಕಠಿಣ ಪರಿಶ್ರಮ.