ಚಕ್ಸು (ರಾಜಸ್ಥಾನ): ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಇದೀಗ ರಾಜಸ್ಥಾನಕ್ಕೂ ತಲುಪಿದಂತಿದೆ. ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜೈಪುರ ಜಿಲ್ಲೆಯ ಚಕ್ಸುವಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದ್ದು, ಪ್ರವೇಶ ಪಡೆಯಲು ಕಾಲೇಜಿನ ಸಮವಸ್ತ್ರ ಸಂಹಿತೆ ಅನುಸರಿಸುವಂತೆ ಆಡಳಿತ ಮಂಡಳಿ ಆದೇಶಿಸಿರುವ ಘಟನೆ ನಡೆದಿದೆ.
ಕಾಲೇಜು ಆಡಳಿತ ಮಂಡಳಿಯ ಬೇಡಿಕೆಯಿಂದ ವಿದ್ಯಾರ್ಥಿಯರು ಆಕ್ರೋಶಗೊಂಡಿದ್ದು, ಘಟನಾ ಸ್ಥಳಕ್ಕೆ ವಿದ್ಯಾರ್ಥಿಯರ ಕುಟುಂಬಸ್ಥರು ಭೇಟಿ ನೀಡಿ ತಮ್ಮ ಮಕ್ಕಳಿಗೂ ನ್ಯಾಯಯುತವಾದ ಹಕ್ಕುಗಳನ್ನು ನೀಡುವಂತೆ ಆಗ್ರಹಿಸಿ ಕಾಲೇಜು ಆಡಳಿತದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಕೂಡ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಚಕ್ಸು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ವರ್ಮಾ, ಜನರ ಮನವೊಲಿಸಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ, ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಇನ್ಸ್‌ಪೆಕ್ಟರ್, ವಿದ್ಯಾರ್ಥಿಗಳು ಕಾಲೇಜು ನಿಗದಿಪಡಿಸಿದ ಸಮವಸ್ತ್ರ ನಿಯಮವನ್ನು ಅನುಸರಿಸಬೇಕು. ಯುನಿಫಾರ್ಮ್ ಹೊರತುಪಡಿಸಿ ಬೇರೆ ಯಾವುದನ್ನಾದರೂ ಧರಿಸುವುದು ಕಾಲೇಜಿನ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೇ ನೀಡಿದ್ದು, ವಿದ್ಯಾರ್ಥಿಗಳು ಸಮವಸ್ತ್ರವನ್ನು ಹೊರತುಪಡಿಸಿ ಬೇರೆ ಉಡುಪು ಧರಿಸದಂತೆ ನಿರ್ಬಂಧಿಸಲಾಗಿದೆ ಮತ್ತು ಕರ್ನಾಟಕದಲ್ಲಿನ ಹಿಜಾಬ್ ವಿವಾದಕ್ಕೂ ಇಲ್ಲಿ ನಡೆದಿರುವ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರದಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಲ್ಲ.. ಆದರೆ ಇವೆಲ್ಲ ಬೇಕೇಬೇಕು!