ಲಖನೌ(ಉತ್ತರಪ್ರದೇಶ) : ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೃತ ಸಂತ್ರಸ್ತೆ ಕುಟುಂಬಕ್ಕೆ ಪಿಂಚಣಿ, ಕೃಷಿ ಭೂಮಿ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವುದನ್ನು ಪರಿಗಣಿಸುವುದಾಗಿ ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಹಥ್ರಾಸ್ ಪ್ರಕರಣದಡಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಜನ್ ರಾಯ್ ಮತ್ತು ಜಸ್ಪ್ರೀತ್ ಸಿಂಗ್ ನೇತೃತ್ವದ ಲಖನೌ ವಿಭಾಗೀಯ ಪೀಠ ಇಂದು ನಡೆಸಿದೆ.
ನಿಯಮದ ಪ್ರಕಾರ ಮೃತ ಸಂತ್ರಸ್ತೆಯ ಅವಲಂಬಿತರು 5,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಕುಟುಂಬದ ಸದಸ್ಯರಿಗೆ ಉದ್ಯೋಗ, ಕೃಷಿಭೂಮಿ ಮತ್ತು ಮನೆಯನ್ನು ಒದಗಿಸಬೇಕು.
ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಪದವಿ ಮುಗಿಯುವವರೆಗೆ ಶಿಕ್ಷಣದ ವೆಚ್ಚ ಭರಿಸಬೇಕು. ಆದರೆ, ಹಥ್ರಾಸ್ ಮೃತ ಸಂತ್ರಸ್ತೆ ಕುಟುಂಬಕ್ಕೆ ಈ ಸೌಲಭ್ಯಗಳನ್ನು ನೀಡಲಾಗಿಲ್ಲ ಎಂದು ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ಹಿರಿಯ ವಕೀಲ ಜೆ ಎನ್ ಮಾಥುರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ಸಾಯೋದನ್ನ ನೋಡಲು ಕಾಯುತ್ತಿದ್ದೀರಾ?.. ಪಿಎಂ ಮೋದಿಗೆ ಹಥ್ರಾಸ್ ಕೇಸ್ ವಕೀಲೆ ಪ್ರಶ್ನೆ..
ಮುಂದಿನ ವಿಚಾರಣೆಯಲ್ಲಿ ಈ ಎಲ್ಲಾ ಅಂಶಗಳನ್ನು ಚರ್ಚಿಸಲು ವಕೀಲರಿಗೆ ನ್ಯಾಯಾಲಯ ತಿಳಿಸಿದೆ. ಕಾನೂನಿನ ಅಡಿ ಕುಟುಂಬಕ್ಕೆ ಈಗಾಗಲೇ ಒದಗಿಸಿರುವ ಹಾಗೂ ಒದಗಿಸಬಹುದಾದ ಸೌಲಭ್ಯಗಳ ಪಟ್ಟಿ ಮಾಡುವಂತೆ ಸೂಚಿಸಿದೆ.
ಹಥ್ರಾಸ್ ಕೇಸ್ : 2020ರ ಸೆಪ್ಟೆಂಬರ್ 14ರಂದು ಉತ್ತರಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಸೆ.29ರಂದು ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.