ಚೆನ್ನೈ: ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್ ಪರೀಕ್ಷೆ) ಅನುತ್ತೀರ್ಣನಾದ ಒಬ್ಬ ಅಭ್ಯರ್ಥಿಗೆ ಮೂಲ ಉತ್ತರ ಪತ್ರಿಕೆ ನೀಡುವಂತೆ ಮದ್ರಾಸ್ ಹೈಕೋರ್ಟ್ ನವದೆಹಲಿ ಮೂಲದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ನಿರ್ದೇಶನ ನೀಡಿದೆ.
ನೀಲಗಿರಿ ಜಿಲ್ಲೆ ಮೂಲದ ಕ್ರಿಸ್ಮಾ ವಿಕ್ಟೋರಿಯಾ ಅವರ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಆರ್. ಸುರೇಶ್ ಕುಮಾರ್ ಇತ್ತೀಚೆಗೆ ಈ ನಿರ್ದೇಶನ ನೀಡಿದರು. ಅರ್ಜಿದಾರರು ಕಳೆದ ತಿಂಗಳು, ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (OMR) ಉತ್ತರ ಪತ್ರಿಕೆಗಾಗಿ ತನ್ನ ಮಗಳ ಕೋರಿಕೆಯನ್ನು ಪರಿಗಣಿಸುವಂತೆ ಎನ್ಟಿಎಗೆ ನಿರ್ದೇಶನ ನೀಡುವಂತೆ ಪ್ರಾರ್ಥಿಸಿದ್ದರು.
ಸರ್ಕಾರದ ಪರ ವಕೀಲರು, ಒಎಂಆರ್ ಶೀಟ್‌ನ ಪ್ರತಿಯನ್ನು ಅರ್ಜಿದಾರರ ಪರಿಶೀಲನೆಗಾಗಿ ನೀಡಬಹುದು ಎಂದು ಕೋರ್ಟ್ಗೆ ತಿಳಿಸಿದರು. ಅರ್ಜಿದಾರರು ನೋಯ್ಡಾದಲ್ಲಿರುವ ಎನ್‌ಟಿಎ ಕಚೇರಿಗೆ ಹೋದಲ್ಲಿ, ವಿದ್ಯಾರ್ಥಿನಿಯ ಮೂಲ ಉತ್ತರ ಪತ್ರಿಕೆಯನ್ನು ತೋರಿಸಲು ಏಜೆನ್ಸಿ ಸಿದ್ಧವಾಗಿದೆ ಎಂದರು. ಏಜೆನ್ಸಿ ಕಚೇರಿಗೆ ಭೇಟಿ ನೀಡಲು ಸಿದ್ಧ ಎಂದು ಅರ್ಜಿದಾರರ ಪರ ವಕೀಲರು ಇದೇ ಸಂದರ್ಭದಲ್ಲಿ ನ್ಯಾಯಾಧೀಶರಿಗೆ ತಿಳಿಸಿದರು.
ಅರ್ಜಿದಾರರು ಎನ್‌ಟಿಎ ಕಚೇರಿಗೆ 10 ದಿನಗಳ ಒಳಗಾಗಿ ಭೇಟಿ ನೀಡುವ ದಿನಾಂಕವನ್ನು ನಿಗದಿಪಡಿಸುವಂತೆ ಮತ್ತು ನಿಗದಿತ ದಿನಾಂಕವನ್ನು ಇಮೇಲ್ ಮೂಲಕ ಮುಂಚಿತವಾಗಿ ತಿಳಿಸುವಂತೆ NTA ಗೆ ನಿರ್ದೇಶಿಸಿದ ನಂತರ ನ್ಯಾಯಾಧೀಶರು ಅರ್ಜಿ ವಿಲೇವಾರಿ ಮಾಡಿದರು.
ಇದನ್ನೂ ಓದಿ:ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ರಾಜ್ಯದ ಅಭ್ಯರ್ಥಿಗಳ ಉತ್ತಮ ಸಾಧನೆ