ಹೈದರಾಬಾದ್ (ತೆಲಂಗಾಣ): ವಿವಾದಿತ ಹೇಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ತೆಲಂಗಾಣದ ಬಿಜೆಪಿ ಶಾಸಕ ರಾಜಾಸಿಂಗ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಬಿಡುಗಡೆಗೆ ಪ್ರಮುಖ ಷರತ್ತಗಳನ್ನೂ ಉಚ್ಚ ನ್ಯಾಯಾಲಯ ವಿಧಿಸಿದೆ.
ಪಿಡಿ ಕಾಯ್ದೆಯಡಿ ಚರ್ಲಪಲ್ಲಿ ಜೈಲಿನಲ್ಲಿರುವ ರಾಜಾಸಿಂಗ್ಗೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ. ಅಲ್ಲದೇ, ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲೂ ಯಾವುದೇ ಜಾಥಾ ನಡೆಸಬಾರದು ಹಾಗೂ ಮೂರು ತಿಂಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಹ ಹಾಕಬಾರದು ಎಂಬ ಷರತ್ತನ್ನೂ ಹೈಕೋರ್ಟ್ ವಿಧಿಸಿದೆ.
ವಿವಾದಾತ್ಮಕ ಹೇಳಿಕೆ ಮೂಲಕ ಆಶಾಂತಿ ಉಂಟು ಮಾಡಿದ್ದ ಆರೋಪದ ಮೇಲೆ ಆ.25ರಂದು ಮೇಲೆ ಶಾಸಕ ರಾಜಾಸಿಂಗ್ನನ್ನು ಪಿಡಿ ಕಾಯ್ದೆಯಡಿ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಪೊಲೀಸರು ಪಿಡಿ ಕಾಯ್ದೆಯಡಿ ದಾಖಲಿಸಿರುವುದನ್ನು ಪ್ರಶ್ನಿಸಿ ರಾಜಾಸಿಂಗ್ ಪತ್ನಿ ಉಷಾಭಾಯಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳ ಕಾಲ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಸಾದ್ ವಾದ ಮಂಡಿಸಿ, ರಾಜಾಸಿಂಗ್ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇತ್ತ, ರಾಜಾಸಿಂಗ್ ಪತ್ನಿ ಪರ ವಕೀಲ ರವಿಚಂದರ್, ಈ ಹಿಂದೆ ಪಿಡಿ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ್ದ ವಿಷಯವನ್ನು ಉಲ್ಲೇಖಿಸಿದರು. ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಜಾಮೀನು ನೀಡಿ ಆದೇಶಿಸಿದ್ದಾರೆ.
ಏನಿದು ಪ್ರಕರಣ?: ಹೈದರಾಬಾದ್ ಗೋಶಾಮಹಲ್‌ನ ಶಾಸಕರಾಗಿರುವ ರಾಜಾ ಸಿಂಗ್ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಅಲ್ಲದೇ, ರಾಜಾಸಿಂಗ್ ಹೇಳಿಕೆಗೆ ಬಿಜೆಪಿ ಹೈಕಮಾಂಡ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ರಾಜಾಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಿತ್ತು. ಕೂಡಲೇ ಪಕ್ಷದ ಜವಾಬ್ದಾರಿಯಿಂದ ಕೆಳಗಿಳಿಸುವುದಾಗಿ ಘೋಷಿಸಿತ್ತು. ಜೊತೆಗೆ ಪಕ್ಷದಿಂದ ಏಕೆ ಉಚ್ಚಾಟಿಸಬಾರದು ಎಂಬುದಕ್ಕೆ 10 ದಿನದೊಳಗೆ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಸಹ ನೀಡಲಾಗಿತ್ತು.
ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ: ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ