ಹರಿದ್ವಾರ: ಅತ್ಯಾಚಾರದ ಸುಳ್ಳು ಆರೋಪ ಮಾಡುವ ಮೂಲಕ ಶಾಂತಿಕುಂಜ್ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಅವರನ್ನು ಬ್ಲಾಕ್‌ಮೇಲ್ ಮಾಡಿದ್ದ ಹೇಮಲತಾ ಸಾಹು ಎಂಬ ಮತ್ತೊಬ್ಬ ಮಹಿಳೆಯನ್ನು ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮೂಲದ ಆರೋಪಿ ಮಹಿಳೆಯನ್ನು ಹರಿದ್ವಾರದ ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಮಂದಿಯನ್ನು ಬಂಧಿಸಲಾಗಿದೆ.
2021 ರಲ್ಲಿ ಛತ್ತೀಸ್‌ಗಢದ ಮಹಿಳೆಯೊಬ್ಬರು ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಶಾಂತಿಕುಂಜ್ ಹರಿದ್ವಾರದ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಮತ್ತು ಅವರ ಪತ್ನಿ ಶೈಲ್ ಬಾಲಾ ವಿರುದ್ಧ ದೂರು ನೀಡಿದ್ದರು. ಈ ದೂರಿನ ವಿಚಾರವಾಗಿ ವಿಚಾರಣೆ ನಡೆಸಲು ಶುರು ಮಾಡಿದಾಗ, ನಾನಾ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದವು. ವಿಷಯ ತುಂಬಾ ಗಂಭೀರವಾದ ನಂತರ ತನಿಖೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಶಾಂತಿಕುಂಜ್ ಅವರಿಗೂ ಮೊದಲು ಕೆಲಸ ಮಾಡಿದವರ ಪಿತೂರಿ ಇರುವುದು ಕಂಡುಬಂತು.
ಏನಿದು ಪ್ರಕರಣ: ದೂರಿನಲ್ಲಿ 2010 ರಲ್ಲಿ ಶಾಂತಿಕುಂಜ್‌ನಲ್ಲಿದ್ದಾಗ ಪ್ರಣವ್ ಪಾಂಡ್ಯ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಶೈಲ್ ಬಾಲಾ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದರು. ಎಫ್‌ಐಆರ್ ಅನ್ನು ಹರಿದ್ವಾರಕ್ಕೆ ವರ್ಗಾಯಿಸಿದಾಗ, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ನಂತರ ಪ್ರಣವ್ ಪಾಂಡ್ಯ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ತಿಳಿದುಬಂದಿವೆ ಮತ್ತು ಪೊಲೀಸರು ಅದರ ಅಂತಿಮ ವರದಿಯನ್ನು ಸಹ ಸಲ್ಲಿಸಿದರು.
ಇದನ್ನೂ ಓದಿ: ಚುನಾವಣೆಗೆ ಟಿಕೆಟ್ ಕೊಡಿಸುವ ಆಮಿಷ.. ಮಹಿಳೆ ಮೇಲೆ ಅತ್ಯಾಚಾರ ಆರೋಪ: ಎಂಎನ್‌ಎಸ್ ಮುಖಂಡನ ಬಂಧನ
ಬಳಿಕ ನ್ಯಾಯಾಲಯ ಈ ಪ್ರಕರಣದ ತನಿಖೆಗೆ ಮತ್ತೊಮ್ಮೆ ಆದೇಶ ನೀಡಿತ್ತು. ಸಂತ್ರಸ್ತೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಶಾಂತಿಕುಂಜ್‌ನ ಮಾಜಿ ಕೆಲಸಗಾರ ಮನಮೋಹನ್ ನನ್ನ ಮೇಲೆ ಒತ್ತಡ ಹೇರಿ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ಮಹಿಳೆ ತಿಳಿಸಿದ್ದರು. ನಂತರ ಸಂತ್ರಸ್ತೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಆರೋಪಿ ಮನಮೋಹನ್, ಹರಗೋವಿಂದ್, ತೋಶನ್ ಸಾಹು, ಚಂದ್ರಕಲಾ ಸಾಹು ಮತ್ತು ಸುನೀತಾ ಶರ್ಮಾ ಅವರನ್ನು ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ತೋಶನ್ ಸಾಹು ಪತ್ನಿ ಹೇಮಲತಾ ಸಾಹು ತಲೆಮರೆಸಿಕೊಂಡಿದ್ದರು. ಇವರ ಬಂಧನಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಮಹಿಳಾ ಸಬ್ ಇನ್ಸ್‌ಪೆಕ್ಟರ್ ಕಿರಣ್ ಗುಸೇನ್ ನೇತೃತ್ವದ ಪೊಲೀಸ್ ತಂಡವು ಬೆಂಗಳೂರಿನ ಹುಸ್ನಾವಾಲಿಯಲ್ಲಿರುವ ಬಗ್ಗೆ ಮಾಹಿತಿ ಪಡೆದು, ಮೊಬೈಲ್ ಫೋನ್ ಆಧಾರದಲ್ಲಿ ಅವರನ್ನು ಬಂಧಿಸಿದೆ.