ಹೈದರಾಬಾದ್ (ತೆಲಂಗಾಣ): ಇಲ್ಲಿನ ಜುಬಿಲಿ ಹಿಲ್ಸ್ನಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಸಂಚಲನ ಮೂಡಿಸುತ್ತಿದೆ. ನಿವೃತ್ತ ಐಪಿಎಸ್ ಅಧಿಕಾರಿಯ ಮನೆಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಶಾಸನ್ ನಗರದಲ್ಲಿ ಕುಟುಂಬಸಮೇತ ವಾಸವಾಗಿದ್ದ ಮಾಜಿ ಅಧಿಕಾರಿ ತಮ್ಮ ಮಗನ ಮನೆಗೆ ಹೋಗಿದ್ದಾಗ ಕೃತ್ಯ ನಡೆದಿದೆ.
ಶುಕ್ರವಾರ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಗೆ ನುಗ್ಗಿರುವ ಕಳ್ಳ, ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾನೆ. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆಯಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಜುಬಿಲಿ ಹಿಲ್ಸ್ ಪೊಲೀಸರ ಪ್ರಕಾರ, ನಿವೃತ್ತ ಐಪಿಎಸ್ ಕೊಮ್ಮಿ ಆನಂದಯ್ಯ ಅವರು ತಮ್ಮ ಪತ್ನಿಯೊಂದಿಗೆ ಜುಬಿಲಿ ಹಿಲ್ಸ್‌ನ ಪ್ರಶಾಸನ್ ನಗರದ ಫ್ಲಾಟ್ ನಂಬರ್ 222 ರಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಪತ್ನಿಯೊಂದಿಗೆ ಕಾಕಿನಾಡದಲ್ಲಿ ಮುನ್ಸಿಪಲ್ ಕಮಿಷನರ್ ಆಗಿರುವ ತಮ್ಮ ಮಗ ರಮೇಶ್ ಮನೆಗೆ ಹೋಗಿದ್ದರು. ಶುಕ್ರವಾರ ಮತ್ತು ಶನಿವಾರ ನಡುವಿನ ರಾತ್ರಿ ಕಳ್ಳತನವಾಗಿದೆ.
ಇದನ್ನೂ ಓದಿ: ಬೈಕ್ ನಿಲ್ಲಿಸಿ ಅಜ್ಜಿಯ ಸರ ಎಳೆದ ಕಿಡಿಗೇಡಿ; ಕೈಯಲ್ಲಿದ್ದ ಬ್ಯಾಗ್‌ನಿಂದ ಹೊಡೆದು ಓಡಿಸಿದ 10 ವರ್ಷದ ಬಾಲಕಿ!- ವಿಡಿಯೋ
ಶನಿವಾರ ಬೆಳಗ್ಗೆ ಆನಂದಯ್ಯರ ಮನೆ ಕೆಳಗಡೆ ಸೆಲ್ಲಾರ್‌ನಲ್ಲಿ ವಾಸವಿದ್ದ ಚಾಲಕ ಫೋನ್ ಮಾಡಿ ಮನೆಯಲ್ಲಿ ಕಳ್ಳತನವಾಗಿರುವುದರ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಬಂದು ಪರಿಶೀಲಿಸಿದಾಗ ಬೀರುವಿನಲ್ಲಿಟ್ಟಿದ್ದ 30 ತೊಲೆ ಚಿನ್ನ ಹಾಗೂ 20 ತೊಲೆ ಬೆಳ್ಳಿಯ ಆಭರಣಗಳು, 40,000 ನಗದು, 500 ಅಮೆರಿಕನ್ ಡಾಲರ್ ಮತ್ತು ಎಂಟು ಬೆಲೆಬಾಳುವ ಕೈಗಡಿಯಾರ ಕಳ್ಳತನವಾಗಿರುವುದು ಗೊತ್ತಾಗಿದೆ. ಶನಿವಾರ ರಾತ್ರಿ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ: "ಕೈ" ಕೊಟ್ಟ ಏರ್ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ: 8 ಕೆಜಿ ಬಂಗಾರ ವಶ
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಶುಕ್ರವಾರ-ಶನಿವಾರ ಮಧ್ಯರಾತ್ರಿ 1.15ರ ಸುಮಾರಿಗೆ ಆರೋಪಿ, ಆನಂದಯ್ಯರ ಮನೆ ಹಿಂಭಾಗದಿಂದ 2ನೇ ಮಹಡಿ ಪ್ರವೇಶಿಸಿದ್ದಾನೆ. ಮನೆಯ ಹಿಂಬದಿ ಹಾಕಿದ್ದ ಬಾಗಿಲು ಒದ್ದು ತೆರೆದಿದ್ದಾನೆ. ಅಡುಗೆ ಮನೆ ಮೂಲಕ ಒಳಹೊಕ್ಕ ಆತ ಕೆಲವು ಬೆಳ್ಳಿ ವಸ್ತುಗಳನ್ನು ಚೀಲದಲ್ಲಿ ಹಾಕಿಕೊಂಡಿದ್ದಾನೆ. ಮೊದಲ ಮಹಡಿಗೆ ಹೋಗಿ ಲಾಕರ್ನಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ನಗದು, ಡಾಲರ್, ವಾಚ್ಗಳನ್ನು ತೆಗೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಮನೆಯಿಂದ ಹೊರಬಂದ ಕಳ್ಳ ಲಿಫ್ಟ್ ಕೇಳಿ ಪರಾರಿಯಾಗಿದ್ದಾನೆ. ಸಿಸಿಟಿವಿ ಪರಿಶೀಲನೆ ಸಂದರ್ಭದಲ್ಲಿ ಆರೋಪಿ ಸಿವಿಆರ್ ನಗರದಿಂದ ಇನ್ನೊಂದು ವಾಹನ ಹತ್ತಿ ಹೋಗಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಮೊದಲೇ ಕಳ್ಳತನಕ್ಕೆ ಸ್ಕೆಚ್ ಹಾಕಿರಬಹುದೆಂದು ಎಂದು ಪೊಲೀಸರು ಶಂಕಿಸಿದ್ದಾರೆ. ಕಳ್ಳನನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಸೈಕಲ್ ಮೇಲೆ ಬಂದು ಸ್ಕೂಟರ್ ಕದ್ದೊಯ್ದ ಖದೀಮ: ಸಿಸಿಟಿವಿಯಲ್ಲಿ ಕೃತ್ಯ ಸೆರೆ