ಡೆಹ್ರಾಡೂನ್(ಉತ್ತರಾಖಂಡ): ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಉತ್ತರ ಭಾರತ ನಲುಗಿ ಹೋಗಿದೆ. ಜನಜೀವನ ಅಸ್ತವ್ಯಸ್ಥವಾಗಿದ್ದು ದಿನದೂಡಲು ಸಂಕಷ್ಟಪಡುವಂತಾಗಿದೆ. ಡೆಹ್ರಾಡೂನ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಆಮ್ಲಾವಾ ನದಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಮುರಿದು ಬಿದ್ದಿದೆ. ಆದರೂ ಸಹ ಅದೇ ಸೇತುವೆ ಮೂಲಕ ಜನರು ನದಿ ದಾಟಲು ಪ್ರಯತ್ನಿಸುತ್ತಿದ್ದಾರೆ.
ಉತ್ತರಕಾಶಿ ಜಿಲ್ಲೆಯ ದಬ್ರಾನಿ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬೃಹತ್ ಬಂಡೆಗಳು ಬಿದ್ದಿದ್ದು, ಅವುಗಳನ್ನು ತೆರವುಗೊಳಿಸಲು ಬಿಆರ್‌ಒ ಕಾರ್ಯಾಚರಣೆ ನಡೆಸುತ್ತಿದೆ.
ಧರಸುಗಡ್‌ನಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಹಳ್ಳಿಗಳು ಅಪಾರ ಪ್ರಮಾಣದ ಹಾನಿಗೊಳಗಾಗಿವೆ. ಭಾರಿ ಮಳೆಯಿಂದ ಉಂಟಾದ ಪ್ರವಾಹವು ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ.
ಇನ್ನು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಬೋಹ್ ಕಣಿವೆಯಲ್ಲಿ ಸೋಮವಾರದಂದು ಭಾರಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.