ಹೈದರಾಬಾದ್: ತೆಲಂಗಾಣ ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಧಾರಾಕಾರ ಮಳೆ ಸುರಿದಿದೆ. ಅನೇಕ ಸ್ಥಳಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಎರಡು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡವು. ವಾಹನ ಸವಾರರು, ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು. ಸಿಕಂದರಾಬಾದ್, ಉಪ್ಪಲ್, ಎಲ್‌ಬಿನಗರ, ವನಸ್ಥಲಿಪುರಂ, ದಿಲ್‌ಸುಖ್‌ನಗರ, ಮಲಕ್‌ಪೇಟ್, ಕೋಠಿ, ಅಬಿಡ್ಸ್, ಲಕ್ಡಿಕಪೂಲ್, ಖೈರತಾಬಾದ್, ಸೋಮಾಜಿಗುಡ, ಅಮೀರ್‌ಪೇಟ್, ಎರ್ರಗಡ್ಡಾ, ಕುಕಟ್‌ಪಲ್ಲಿ, ಮಿಯಾಪುರ್, ಲಿಂಗಂಪಲ್ಲಿ ಸೇರಿದಂತೆ ಅನೇಕ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಆ ಪ್ರದೇಶಗಳಲ್ಲಿ ಮೊಣಕಾಲು ತನಕ ನೀರು ರಸ್ತೆಯಲ್ಲೇ ನಿಂತಿರುವುದು ತಿಳಿದು ಬಂದಿದೆ.
ರಸ್ತೆಗೆ ಬಿದ್ದ ಮರಗಳು, .. ವಾಹನ ಸವಾರರು ಪರದಾಟ: ಯೂಸುಫ್ ಗುಡಾ ವಿಭಾಗದ ಶ್ರೀಕೃಷ್ಣನಗರ ಜಲಾವೃತಗೊಂಡಿದೆ. ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಪ್ರವಾಹಕ್ಕೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಇಂದಿರಾ ಪಾರ್ಕ್ನಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದ್ದು, ಜಿಹೆಚ್‌ಎಂಸಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಫಿಲಂನಗರ, ರಾಯದುರ್ಗ, ಗಚ್ಚಿಬೌಲಿ ಭಾಗದಲ್ಲಿ ಮರಗಳು ರಸ್ತೆಗೆ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬಿದ್ದ ಮರಗಳನ್ನು ಡಿಆರ್‌ಎಫ್ ಸಿಬ್ಬಂದಿ ತೆರೆವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಇನ್ನೂ ಮೂರು ದಿನ ಮಳೆ: ಹಳೆ ಕಟ್ಟಡ ಹಾಗೂ ಮನೆಗಳಲ್ಲಿ ವಾಸವಿರುವವರು ಎಚ್ಚೆತ್ತುಕೊಳ್ಳುವಂತೆ ಜಿಹೆಚ್‌ಎಂಸಿ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಕರ್ನಾಟಕದಿಂದ ತೆಲಂಗಾಣ ಮೂಲಕ ದಕ್ಷಿಣ ಛತ್ತೀಸ್‌ಗಢದವರೆಗೆ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮಳೆಯಾಗುತ್ತಿದೆ. ಆದರೆ, ಪಾದಚಾರಿಗಳು ಮತ್ತು ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸುವಾಗ ಎಚ್ಚರದಿಂದಿರಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ಕಾನ್ಸ್ಟೇಬಲ್ ಸಾವು: ಸಿಕಂದರಾಬಾದ್ನ ಕಲಾಸಿಗುಡದಲ್ಲಿ 11 ವರ್ಷದ ಬಾಲಕಿ ಮೌನಿಕಾ ನಾಲಾ ಸಾವನ್ನಪ್ಪಿದ ಘಟನೆ ಮರೆಯುವ ಮುನ್ನವೇ ಮತ್ತೊಂದು ದುರುಂತ ಸಂಭವಿಸಿದೆ. ಜುಬಿಲಿ ಹಿಲ್ಸ್ ಚೆಕ್ ಪೋಸ್ಟ್ನಲ್ಲಿ ವಿದ್ಯುತ್ ಸ್ಪರ್ಶದಿಂದ ಗ್ರೇಹೌಂಡ್ಸ್ ಕಾನ್ಸ್ಟೇಬಲ್ವೊಬ್ಬರು ಸಾವನ್ನಪ್ಪಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಯೂಸುಫ್‌ಗುಡಾದ ಪೊಲೀಸ್ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿರುವ ವೀರಸ್ವಾಮಿ ಅವರು ತಮ್ಮ ಕಿರಿಯ ಸಹೋದರನೊಂದಿಗೆ ಜೂಬಿಲಿ ಹಿಲ್ಸ್‌ನಿಂದ ಎನ್‌ಟಿಆರ್ ಭವನದ ಕಡೆ ಮನೆಗೆ ಮರಳುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಾಹನ ಸಮೇತ ಫುಟ್ಪಾತ್ ಮೇಲೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮತ್ತು ಮಳೆ ಹಿನ್ನೆಲೆ ಕಂಬಕ್ಕೆ ವಿದ್ಯುತ್ ಹರಿದಿದ್ದು, ಈ ವೇಳೆ ಕಾನ್ಸ್ಟೇಬಲ್ಗೆ ವಿದ್ಯುತ್ ಶಾಕ್ ತಗುಲಿದೆ. ಮಾಹಿತಿ ಪಡೆದ ಪೊಲೀಸರು ಹಾಗೂ 108 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಿಪಿಆರ್ ನಡೆಸಿದರು. ಬಳಿಕ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಮಳೆ, ಕೆಲವೆಡೆ ಯೆಲ್ಲೋ ಅಲರ್ಟ್.. ಹವಾಮಾನ ಇಲಾಖೆ ಮುನ್ಸೂಚನೆ