ಭಾರತದಲ್ಲಿ ಮೊದಲ ಬಾರಿಗೆ ಹೃದಯ ಕಸಿ ಚಿಕಿತ್ಸೆ ಸುಮಾರು 20 ಸರ್ಜನ್ಗಳ ತಂಡದ ಮೂಲಕ ಪ್ರೊಫೆಸರ್ ಪನಂಗಿಪಲ್ಲಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಿತು ಎಂದು ವರದಿಗಳು ಹೇಳುತ್ತದೆ. ಈ ಹೃದಯ ಕಸಿ ಸುಮಾರು 59 ನಿಮಿಷಗಳಲ್ಲಿ ನಡೆದಿದ್ದು, ಆ ರೋಗಿ ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದನು.
ಮಾನವ ಅಂಗಾಂಗ ಕಸಿ ಮಸೂದೆ ಜುಲೈ 7 1994ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಕಾಲದಲ್ಲಿ ಪಾಸಾಗಿ, ಅಂಗೀಕಾರಗೊಂಡಿತ್ತು. ಇದಾದ ನಂತರ ಪ್ರೊ.ಪಿ. ವೇಣುಗೋಪಾಲ್ ಏಮ್ಸ್ನಲ್ಲಿ ಅದೇ ವರ್ಷ ಆಗಸ್ಟ್ 3ರಂದು ಹೃದಯ ಕಸಿ ಮಾಡಿದ್ದರು. ಈ ಮಸೂದೆ ಮಾನವ ಅಂಗಾಗವನ್ನು ತೆಗೆಯುವ ಬಗ್ಗೆ, ಸಂಗ್ರಹಣೆ ಮತ್ತು ಕಸಿಯ ಬಗ್ಗೆ ಕೆಲವು ವಿಚಾರಗಳನ್ನ ಬಗ್ಗೆ ತಿಳಿಸುವಂತಿತ್ತು.
ದೇಶದ ಮೊದಲ ಹೃದಯ ಕಸಿ
40 ವರ್ಷದ ರೋಗಿ ದೇವಿರಾಮ್ ಕಾರ್ಡಿಯೋಮಯೋಪತಿ(ಹೃದಯ ಸ್ನಾಯುಗಳಿಗೆ ಸಂಬಂಧಿಸಿದ ರೋಗ) ಎಂಬ ರೋಗದಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ಗೆ ದಾಖಲಾಗಿದ್ದನು. ದೇವಿರಾಮ್ ರಕ್ತದ ಗುಂಪು ಎಬಿ ಪಾಸಿಟಿವ್ ಆಗಿತ್ತು.
ಈ ವೇಳೆ 35 ವರ್ಷದ ಮಹಿಳೆಯೊಬ್ಬಳು ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಳು. ಮಹಿಳೆಯ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ದೇವಿರಾಮ್ಗೆ ಮಹಿಳೆಯ ಹೃದಯ ಕಸಿ ಮಾಡಲು ನಿರ್ಧಾರ ಮಾಡಲಾಯಿತು. ದೇವಿರಾಮ್ಗೆ ಸರ್ಜರಿ ನಡೆದು ಯಶಸ್ವಿಯಾದ ನಂತರ ಕೆಲವು ವರ್ಷಗಳ ನಂತರ ಮೆದುಳಿನ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದನು.
ವಿಶ್ವದಲ್ಲಿ ಮೊದಲ ಹೃದಯ ಕಸಿ
ವಿಶ್ವದಲ್ಲಿ ಮೊದಲ ಬಾರಿಗೆ ಹೃದಯ ಕಸಿ ನಡೆದಿದ್ದು, 1967ರ ಡಿಸೆಂಬರ್ 3ರಂದು. ದಕ್ಷಿಣ ಆಫ್ರಿಕಾದ ರಾಜಧಾನಿಯಾದ ಕೇಪ್ಟೌನ್ನಲ್ಲಿ ಸರ್ಜನ್ ಕ್ರಿಶ್ಚಿಯನ್ ಬರ್ನಾರ್ಡ್ ಎಂಬಾತ ಮೊದಲ ಹೃದಯ ಕಸಿ ಮಾಡಿದ್ದನು.
ಭಾರತದಲ್ಲಿ ಮೊದಲ ಹೃದಯ ಕಸಿ ಮಾಡಿದ್ದ ವೇಣುಗೋಪಾಲ್ ಅವರನ್ನು 2014ರಲ್ಲಿ ಪ್ರಧಾನಿ ಮೋದಿ ಏಮ್ಸ್ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಭಿನಂದಿಸಿದ್ದರು. ವೇಣುಗೋಪಾಲ್ ಅವರಿಗೆ 1998ರಲ್ಲೇ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಭೂಷಣ್ ಪುರಸ್ಕಾರ ಸಂದಿತ್ತು.
ಭಾರತದಲ್ಲಿ ಈವರೆಗೆ ಆದ ಹೃದಯ ಕಸಿಗಳು
ಪ್ರತೀವರ್ಷ ಸುಮಾರು 50 ಸಾವಿರ ಮಂದಿ ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ, ಕೇವಲ 10ರಿಂದ 15 ಮಂದಿಗೆ ಮಾತ್ರವೇ ಪ್ರತೀ ವರ್ಷ ಹೃದಯ ಕಸಿ ಮಾಡಲಾಗುತ್ತದೆ. ನ್ಯಾಷನಲ್ ಆರ್ಗಾನ್ ಆ್ಯಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಷನ್ (ಎನ್ಒಟಿಟಿಓ) ಪ್ರಕಾರ 2018ರಲ್ಲಿ 241 ಮಂದಿ ಭಾರತದಲ್ಲಿ ಹೃದಯವನ್ನು ದಾನ ಮಾಡಿದ್ದಾರೆ.
ವೈದ್ಯರು ಹೇಳುವಂತೆ ಪ್ರತೀವರ್ಷ ಸುಮಾರು 2 ಲಕ್ಷ ಮಂದಿಗೆ ಹೃದಯ ಕಸಿ ಮಾಡುವ ಅನಿವಾರ್ಯತೆ ಏರ್ಪಡುತ್ತದೆ. ಆದರೆ, ಕೆಲವು ಕೆಲವು ಮಂದಿಗೆ ಹೃದಯ ಕಸಿ ಮಾಡುವ ಅವಕಾಶ ಒದಗಿಬರುತ್ತದೆ.
ಹೃದಯ ಕಸಿಯ ಸವಾಲುಗಳು
ಹೃದಯ ಕಸಿ ಮಾಡುವುದು ಸರಳವೇನಲ್ಲ. ಸರಿಯಾದ ಸಮಯಕ್ಕೆ ಹೃದಯ ದಾನಿಯ ಹೃದಯ ಕಸಿ ಮಾಡದಿದ್ದರೆ, ಆ ಹೃದಯ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಂದು ಬಾರಿ ಹೃದಯ ಕಸಿಗೆ ಒಳಗಾಗುವ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕೂಡಾ ಹೊಸ ಹೃದಯವನ್ನು ಸ್ವೀಕರಿಸದೇ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹೃದಯ ಕಸಿಯ ಆರು ತಿಂಗಳ ನಂತರವೂ ಹೃದಯ ಕಸಿ ವಿಫಲವಾಗುವ ಸಾಧ್ಯತೆಗಳು ಇರುತ್ತವೆ. ಇದೇ ಕಾರಣಕ್ಕೆ ನಿಯಮಿತವಾಗಿ ಹೃದಯವನ್ನು ಕಾಪಾಡಿಕೊಳ್ಳಲು ಔಷಧಗಳು ಮತ್ತು ವಿಶ್ರಾಂತಿಯ ಅಗತ್ಯತೆ ಇರುತ್ತದೆ.
ಕೆಲವೊಮ್ಮೆ ಹೊಸ ಹೃದಯವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳುವ ಔಷಧಗಳು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಇನ್ಫೆಕ್ಷನ್ (ಸೋಂಕಿನ ಸಾಧ್ಯತೆಯನ್ನು ಹೆಚ್ಚು ಮಾಡುತ್ತವೆ. ಔಷಧಗಳನ್ನು ದೀರ್ಘಕಾಲ ಬಳಸುವುದರಿಂದ ಕ್ಯಾನ್ಸರ್, ಡಯಾಬಿಟೀಸ್, ಆಸ್ಟಿಯೋ ಪೊರಾಸಿಸ್, ಕಿಡ್ನಿ ವೈಫಲ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ 13ನೇ ದಿನ: ನೀರಜ್ ಚೋಪ್ರಾ ಮೇಲೆ ಪದಕದ ಭಾರಿ ನಿರೀಕ್ಷೆ