ಅಮರಾವತಿ: ನಾಯಿಗಳಿಗೆ ಇರುವ ನಿಯತ್ತು, ಸ್ವಾಮಿನಿಷ್ಠೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. ತನ್ನ ಪ್ರೀತಿಯ ಮಾಲಕಿ ಜೊತೆ ಒಡನಾಟ ಹೊಂದಿದ್ದ ನಾಯಿ, ಆಕೆ ಸತ್ತಿರುವುದು ತಿಳಿಯದೇ ಅವಳ ಬರುವಿಕೆಗೆ ಚಪ್ಪಲಿ ಬಳಿಯೇ ರಾತ್ರಿಯೆಲ್ಲಾ ಕಾದು ಕುಳಿತ ಮನಕಲಕುವ ಘಟನೆ ನಡೆದಿದೆ.
ಏನಿದು ಘಟನೆ: ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ಕಳೆದ ಭಾನುವಾರ 22 ವರ್ಷದ ಯುವತಿ ತನ್ನ ಮುದ್ದು ನಾಯಿ ಜೊತೆ ವಾಕಿಂಗ್ ಹೋಗಿದ್ದಳು. ಸೂರ್ಯಾಸ್ತದ ಸೊಬಗು ಆನಂದಿಸುತ್ತಿದ್ದ ನೂರಾರು ಜನರ ಎದುರು ಯುವತಿ ಜಿಎಂಸಿ ಬಾಲಯೋಗಿ ಸೇತುವೆಯಿಂದ ಆಕೆ ನದಿಗೆ ಹಾರಿದ್ದಾಳೆ. ತಕ್ಷಣಕ್ಕೆ ಅಲ್ಲಿದ್ದ ಜನರು ಬೋಟ್ ರೈಡರ್ಗೆ ಎಚ್ಚರಿಸಿದ್ದಾರೆ. ಆದರೆ, ನೀರಿನ ರಭಸದ ಹಿನ್ನೆಲೆ ಯುವತಿ ಕೊಚ್ಚಿ ಹೋಗಿದ್ದು, ಆಕೆಯ ಹುಡುಕಾಟ ವಿಫಲವಾಗಿದೆ.
ಈ ವೇಳೆ ಜೊತೆಯಲ್ಲಿ ನಡೆದು ಬರುತ್ತಿದ್ದ ಮಾಲಕಿ ತಕ್ಷಣಕ್ಕೆ ನದಿಗೆ ಹಾರಿದ ಹಿನ್ನೆಲೆ ನಾಯಿ ಕೂಡ ವಿಚಲಿತಗೊಂಡು ಚಡಪಡಿಸಿದೆ. ಮಾಲಕಿಗಾಗಿ ಸೇತುವೆ ಮೇಲೆ ದಿಕ್ಕು ತೋಚದಂತೆ ನದಿ ಕಡೆ ನೋಡಿದೆ. ಕಡೆಗೆ ಏನು ಮಾಡುವುದು ಎಂದು ತಿಳಿಯದ ನಾಯಿ, ಮಾಲಕಿ ಬರುತ್ತಾಳೆ ಎಂದು ನಿರೀಕ್ಷಿಸುತ್ತ, ಆಕೆಯ ದಾರಿಗಾಗಿ ಕಾದು ಕುಳಿತಿದೆ. ಕಡೆಗೆ ಆಕೆ ತನ್ನ ಚಪ್ಪಲಿ ತೋಡಲು ಬಂದೇ ಬರುತ್ತಾಳೆ ಎಂದು ಆಕೆ ಚಪ್ಪಲಿ ಬಿಟ್ಟ ಸ್ಥಳದಲ್ಲೇ ಅಲುಗಾಡದೇ ಕಾದು ಕುಳಿತಿದೆ. ಭಾನುವಾರ ರಾತ್ರಿಯೆಲ್ಲಾ ಆಕೆಯ ಚಪ್ಪಲಿ ಬಳಿಯೇ ಕುಳಿತು ನಿದ್ದೆಗೆ ಜಾರಿದೆ.
ಈ ಘಟನೆ ಕಂಡ ಅನೇಕ ಜನರು ಮುಖ ಪ್ರಾಣಿಯ ಪ್ರೀತಿಗೆ ಮನಸೋತು ಅದಕ್ಕೆ ಸಾಂತ್ವನ ಮಾಡುವ ಸ್ಥಿತಿಯಲ್ಲೂ ಇಲ್ಲದೇ, ಮರುಕ ಪಟ್ಟು ಮುಂದೆ ಸಾಗಿದ್ದಾರೆ. ಈ ಘಟನೆಗಳು ಸಿಸಿಟಿವಿಯಲ್ಲೂ ಕೂಡ ಸೆರೆಯಾಗಿದ್ದು, ನಾಯಿ ರಾತ್ರಿ ಇಡೀ ಕಾದು ಕುಳಿತ ದೃಶ್ಯ ವೈರಲ್ ಆಗಿದೆ.
ಇನ್ನು ಮರುದಿನ ಬೆಳಗ್ಗೆ ಸಾವನ್ನಪ್ಪಿದ ಯುವತಿಯ ತಾಯಿ ಸ್ಥಳಕ್ಕೆ ಬಂದು ನಾಯಿಯನ್ನು ಮನೆಗೆ ಕರೆದೊಯ್ದಿದ್ದಾರೆ. ಸಾವನ್ನಪ್ಪಿದ ಯುವತಿಯನ್ನು ಮಂದಾಗ್ನಿ ಕಾಂಚನಾ (22) ಎಂದು ಗುರುತಿಸಲಾಗಿದೆ. ಈಕೆ ಯೆನಮ್ ಫೆರ್ರಿ ರಸ್ತೆಯಲ್ಲಿ ವಾಸವಿದ್ದಳು. ಆಕೆ ತಾಯಿ ಅಲ್ಲಿಯೇ ಒಂದು ಹೋಟೆಲ್ ನಡೆಸುತ್ತಿದ್ದರು.
ಯುವತಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆ ಎಂಬುದಾಗಿ ತಿಳಿಸಿದ್ದಾರೆ. ತನ್ನ ಮಾಲಕಿ ಬಾರದೂರಿಗೆ ತೆರಳಿದ್ದಳು ಎಂಬ ಸತ್ಯ ಗೊತ್ತಿಲ್ಲದ ಶ್ವಾನ ಆಕೆಯ ಬರುವಿಕೆಯ ನಿರೀಕ್ಷೆಯಲ್ಲಿಯೇ ಇದೆ.
ಹಾಚಿಕೊ ಕಥೆ ನೆನಪಿಸಿದ ನಾಯಿ: ಜಪಾನಿನಲ್ಲಿನ ನಡೆದ ಹಾಚಿಕೊ ಎಂಬ ಕಥೆಯನ್ನು ಈ ಶ್ವಾನ ಕೂಡ ನೆನಪಿಸಿದೆ. ಜಪಾನಿನಲ್ಲಿ 1923-1935ರಲ್ಲಿ ನಡೆದ ಘಟನೆ ಇದು. ಪ್ರೊ ಪಾರ್ಕರ್ ವಿಲ್ಸನ್ ಕೆಲಸಕ್ಕಾಗಿ ಪ್ರತಿನಿತ್ಯ ರೈಲಿನಲ್ಲಿ ಓಡಾಡುತ್ತಿದ್ದರು. ಆತನ ಹಾಚಿಕೊ ಎಂಬ ಹೆಸರಿನ ನಾಯಿ ಕೂಡ ಪ್ರತಿನಿತ್ಯ ಅವನ ಜೊತೆ ರೈಲು ನಿಲ್ದಾಣದವರೆಗೆ ಹೋಗಿ ದಿನವಿಡೀ ಅಲ್ಲಿಯೇ ಕಾಯುತ್ತಿತ್ತು. ಸಂಜೆ ಅದರ ಮಾಲೀಕ ಬಂದಾಗ ಆತನ ಜೊತೆ ಮನೆಗೆ ಮರಳುತ್ತಿತ್ತು. ಒಂದು ದಿನ ಕೆಲಸಕ್ಕೆ ಹೋದ ಪ್ರೊ ಬಾರದೇ ಹೋದಾಗ ವರ್ಷಗಟ್ಟಲೇ ಆ ನಾಯಿ ರೈಲ್ವೆ ನಿಲ್ದಾಣದಲ್ಲೇ ಆತನಿಗಾಗಿ ಕಾಯುತ್ತ, ಅಲ್ಲಿಯೇ ಜೀವ ಬಿಟ್ಟಿತ್ತು. ಜಪಾನಿನಲ್ಲಿ ನಡೆದ ಈ ನೈಜ ಘಟನೆ ಆಧಾರದ ಮೇಲೆ 'ಹಾಚಿ: ಎ ಡಾಗ್ಸ್ ಟೇಲ್' ಎಂಬ ಹೆಸರಿನಲ್ಲಿ ಹಾಲಿವುಡ್ನಲ್ಲಿ ಚಿತ್ರ ಕೂಡ ನಿರ್ಮಾಣವಾಗಿತ್ತು.
ಇದನ್ನೂ ಓದಿ: ರೆಡಿಯಾಗಿರಿ! ಈ ವಾರ ಥಿಯೇಟರ್ ಮತ್ತು OTT ಗೆ ಬರುತ್ತಿರುವ ಸಿನಿಮಾಗಳಿವು..