ನವದೆಹಲಿ: ಸಿಎಎ ದಂಗೆಯಲ್ಲಿ ಭಾಗಿಯಾಗಿ ಆಪ್ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ಶಾಸಕ ತಾಹೀರ್ ಹುಸೇನ್ ಜಾಮೀನು ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್ನಲ್ಲಿ ನಡೆಯಲಿದೆ.
ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ ತಾಹೀರ್ ಹುಸೇನ್ ವಿರುದ್ಧ 11 ಎಫ್‌ಐಆರ್ ದಾಖಲಾಗಿದ್ದವು. ಈ ಮೊದಲು 2020 ರ ನವೆಂಬರ್ 25 ರಂದು ವಿಚಾರಣೆಯ ನಂತರ ನ್ಯಾಯಾಲಯವು ದೆಹಲಿ ಪೊಲೀಸರಿಗೆ ಸ್ಟೇಟಸ್ ರಿಪೋರ್ಟ್ ಸಲ್ಲಿಸುವಂತೆ ಆದೇಶಿಸಿತ್ತು.
ಇದನ್ನೂ ಓದಿ: ಕೋವಿಡ್ಗೆ ಮಧ್ಯಪ್ರದೇಶ ಬಿಜೆಪಿ ಸಂಸದ ನಂದಕುಮಾರ್ ಚೌಹಾಣ್ ಬಲಿ: ಸಿಎಂ, ಪಿಎಂ ಸಂತಾಪ
16 ಮಾರ್ಚ್ 2020 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ತಾಹೀರ್ ಹುಸೇನ್ ವಿರುದ್ಧ 11 ಎಫ್‌ಐಆರ್ ಸೇರಿದಂತೆ ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ. 22 ಅಕ್ಟೋಬರ್ 2020 ರಂದು, ಕಾರ್ಕಾರ್ಡೂಮಾ ಜಿಲ್ಲಾ ನ್ಯಾಯಾಲಯ ತಾಹಿರ್ ಹುಸೇನ್ ಅವರ ಮೂರು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
1,700 ಪುಟಗಳನ್ನು ಒಳಗೊಂಡಿರುವ ಚಾರ್ಜ್‌ಶೀಟ್‌ನಲ್ಲಿ ತಾಹೀರ್ ಹುಸೇನ್ ಮತ್ತು ಅವರ ಸಹೋದರ ಷಾ ಆಲಂ ಅವರೊಂದಿಗೆ ಹದಿನೈದು ಜನರ ಹೆಸರುಗಳೂ ಸೇರಿವೆ. ಇದರಲ್ಲಿ ತಾಹೀರ್ ದೆಹಲಿಯಲ್ಲಿ ನಡೆದ ಸಿಎಎ ಗಲಭೆಯ ಸೂತ್ರಧಾರಿ ಎಂದು ಶಂಕಿಸಲಾಗಿದೆ. ಉಚ್ಛಾಟಿತ ಆಪ್ ಕೌನ್ಸಿಲರ್ ವಿರುದ್ಧ ಮೋಸ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.
ವಿವಿಧ ಸ್ಥಳಗಳಲ್ಲಿ ನಡೆಸಿದ ದಾಳಿಗಳಲ್ಲಿ ಕಾನೂನು ಜಾರಿ ಸಂಸ್ಥೆ ಹಲವಾರು ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ಸಹ ವಶಪಡಿಸಿಕೊಂಡಿದೆ. ತಾಹಿರ್ ಹುಸೇನ್ ಅವರ ವಾಟ್ಸ್ಆ್ಯಪ್ ಚಾಟ್‌ಗಳು, ನಕಲಿ ಬಿಲ್‌ಗಳನ್ನು ಸಹ ಪತ್ತೆ ಮಾಡಲಾಗಿದೆ. ಕ್ರಿಮಿನಲ್ ಪಿತೂರಿ ನಡೆಸುವಾಗ ತಾಹೀರ್ ವಿವಿಧ ಕಂಪನಿಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಇಡಿ ಹೇಳಿದೆ.