ನವದೆಹಲಿ: ದೆಹಲಿಯ ಗಡಿಯಲ್ಲಿ ರೈತರ ಚಳವಳಿಯ ಹಿನ್ನೆಲೆಯಲ್ಲಿ ಹೊಸ ಕೃಷಿ ಕಾನೂನುಗಳು ಮತ್ತು ರೈತರಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುಪ್ರೀಂಕೋರ್ಟ್ ಇಂದು ತನ್ನ ಆದೇಶವನ್ನು ಪ್ರಕಟಿಸಲಿದೆ. ಇದನ್ನು ಪರಿಹರಿಸುವ ಉದ್ದೇಶದಿಂದ ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಲಯವು ಉನ್ನತ ಮಟ್ಟದ ಸಮಿತಿ ರಚಿಸುವ ಸಾಧ್ಯತೆಯಿದೆ.
ಮೂರು ಕೃಷಿ ಕಾನೂನುಗಳ ಬಗ್ಗೆ ರೈತರ ಪ್ರತಿಭಟನೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ತಿಳಿಸಿದ್ದು, ಕೇಂದ್ರ ಸರ್ಕಾರ ಇದು ರೈತರೊಂದಿಗೆ ಸಂವಹನ ನಡೆಸುವ ವಿಧಾನವೂ ಬಹಳ ನಿರಾಸೆಯಾಗಿದೆ ಎಂದು ಹೇಳಿದೆ. ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಈಗ ಸಮಿತಿಯನ್ನು ರಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಕೃಷಿ ನ್ಯಾಯ ಮತ್ತು ರೈತರ ಆಂದೋಲನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವಿವಿಧ ಭಾಗಗಳಲ್ಲಿ ಆದೇಶಗಳನ್ನು ರವಾನಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ನಿನ್ನೆ ವಿಚಾರಣೆಯ ವೇಳೆ ಸೂಚಿಸಿತ್ತು.
ಮೂರು ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮತ್ತು ರೈತರ ಆಂದೋಲನದ ಸಂದರ್ಭದಲ್ಲಿ ನಾಗರಿಕರ ಮುಕ್ತ ಸಂಚಾರದ ಹಕ್ಕಿನ ಕುರಿತು ಅರ್ಜಿಗಳನ್ನು ನಿನ್ನೆ ನ್ಯಾಯಪೀಠ ಆಲಿಸಿತ್ತು. ರೈತರೊಂದಿಗಿನ ಮಾತುಕತೆಗೆ ಯಾವುದೇ ಪರಿಹಾರವನ್ನು ಕಂಡುಕೊಳ್ಳದ ಕಾರಣ ನ್ಯಾಯಾಲಯವು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ ಇಡೀ ಪರಿಸ್ಥಿತಿಯ ಬಗ್ಗೆ ತೀವ್ರ ನಿರಾಸೆ ವ್ಯಕ್ತಪಡಿಸಿತ್ತು.
ಇಂದು ಟ್ರ್ಯಾಕ್ಟರ್ ಪರೇಡ್ ಪೂರ್ವಾಭ್ಯಾಸ:
ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರ ಆಂದೋಲನ 48ನೇ ದಿನವೂ ಮುಂದುವರಿದಿದ್ದು, ಇಂದು ಟ್ರ್ಯಾಕ್ಟರ್ ಪರೇಡ್ನ ಪೂರ್ವಾಭ್ಯಾಸ ನಡೆಯಲಿದೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ಗೆ ಸರಿಸಮಾನಾಗಿ ರೈತ ಸಂಘಟನೆಗಳು ಟ್ರ್ಯಾಕ್ಟರ್ ಪರೇಡ್ ನಡೆಸಲಿವೆ.
ಇಂದು ಗಣರಾಜ್ಯೋತ್ಸವದ ಪರೇಡ್ನ ಪೂರ್ವಾಭ್ಯಾಸ ನಡೆಯಲಿದ್ದು, ರೈತರು ಕೂಡಾ ತಮ್ಮ ಟ್ರ್ಯಾಕ್ಟರ್ ಪರೇಡ್ನ ಪೂರ್ವಾಭ್ಯಾಸ ಮಾಡಲಿದ್ದಾರೆ. ಜನವರಿ 23 ಮತ್ತು 24ರಂದು ಸಾವಿರಾರು ರೈತರು ದೆಹಲಿಗೆ ತೆರಳಿ ಟ್ರ್ಯಾಕ್ಟರ್ ಪರೇಡ್ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ.