ಅರಿಶಿನ ಹಾಲು ಪ್ರಾಚೀನ ಕಾಲದಿಂದಲೂ ಪ್ರತಿ ಭಾರತೀಯನ ಮನೆಯಲ್ಲಿ ಜನಪ್ರಿಯವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅದರ ಬೇಡಿಕೆ ಮತ್ತು ಬಳಕೆಯು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಲಕ್ಷಣಗಳಿಂದಾಗಿ ಸಾಕಷ್ಟು ಹೆಚ್ಚಾಗಿದೆ.
ಆದರೆ, ಇದು ನಮ್ಮ ಆರೋಗ್ಯಕ್ಕೆ ಒದಗಿಸುವ ಇತರ ಕೆಲವು ಅದ್ಭುತ ಪ್ರಯೋಜನಗಳನ್ನು ನಾವು ಕಡೆಗಣಿಸಿದ್ದೇವೆ. ಇಂದು ಅನೇಕ ದೊಡ್ಡ ಎಫ್‌ಎಂಸಿಜಿ ಕಂಪನಿಗಳು ಪ್ಯಾಕ್ ಮಾಡಿದ ಗೋಲ್ಡನ್ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಆದರೆ ಅದನ್ನು ಮನೆಯಲ್ಲಿಯೂ ತಯಾರಿಸಬಹುದು.
'ಗೋಲ್ಡನ್ ಮಿಲ್ಕ್'ನ ಆರೋಗ್ಯ ಪ್ರಯೋಜನಗಳು : ಇದು ಭಾರತದಲ್ಲಿ ಪ್ರಾರಂಭವಾಗಿದ್ದು, ಇದನ್ನು 'ಹಲ್ಡಿ ವಾಲಾ ದೂಧ್' ಎಂದು ಕರೆಯಲಾಗುತ್ತದೆ. ಈ ಹಾಲು ವಿಶ್ವಾದ್ಯಂತ ಸಾಕಷ್ಟು ಜನಪ್ರಿಯತೆ ಗಳಿಸಿದೆ ಮತ್ತು ಅರಿಶಿನ ಹಾಲು, ಗೋಲ್ಡನ್ ಹಾಲು, ಅರಿಶಿನ ಲ್ಯಾಟೆ ಮುಂತಾದ ಅನೇಕ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಈ ಹಾಲು ಹೆಚ್ಚು ಜನಪ್ರಿಯವಾಯಿತು. ಯಾಕೆಂದರೆ, ಇದು ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದೆ. ಅಲ್ಲದೇ ರೋಗನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯುತ್ತಮ ಮಾತ್ರವಲ್ಲ, ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.
1. ಕೀಲು ನೋವು ನಿವಾರಣೆ : ಅರಿಶಿನವನ್ನು ಆಯುರ್ವೇದದಲ್ಲಿ ‘ನೈಸರ್ಗಿಕ ಆಸ್ಪಿರಿನ್’ಎಂದು ಕರೆಯುತ್ತಾರೆ. ಇದು ಎಲ್ಲಾ ರೀತಿಯ ನೋವನ್ನು ನಿವಾರಿಸುತ್ತದೆ. ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ. ಈ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತ ಬರುವುದನ್ನು ತಪ್ಪಿಸಬಹುದು.
2. ರೋಗನಿರೋಧಕ ಶಕ್ತಿ ಹೊಂದಿದೆ : ಅರಿಶಿನ ಹಾಲು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ನಮ್ಮ ದೇಹದಲ್ಲಿನ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುವ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ರೋಗನಿರೋಧಕಗಳು ಬೇಕಾಗುತ್ತವೆ. ಆದ್ದರಿಂದ ಇದು ನಮ್ಮ ಕ್ಯಾನ್ಸರ್, ಹೃದ್ರೋಗಗಳು ಮತ್ತು ಇತರ ಕೆಲವು ಸೋಂಕುಗಳು ಮತ್ತು ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆ ಮಾಡುತ್ತದೆ.
3. ಮೆದುಳಿನ ಕಾರ್ಯಗಳನ್ನು ಸುಧಾರಿಸುತ್ತದೆ : ಮೆದುಳಿನ ಕಾರ್ಯಗಳನ್ನು ಸುಧಾರಿಸಲು ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸಲು ಅರಿಶಿನ ಹಾಲು ಸಹಕಾರಿಯಾಗಿದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ವಯಸ್ಸಾದಂತೆ ಸಂಭವಿಸುವ ಬುದ್ಧಿಮಾಂದ್ಯತೆ ಮತ್ತು ಆಲ್ ಜೈಮರ್ ಕಾಯಿಲೆ, ನ್ಯೂರೋ ಡಿಜೆನೆರೆಟಿವ್ ಅಸ್ವಸ್ಥತೆಗಳ ಅಪಾಯ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಕೆಲ ಸಂಶೋಧನೆಗಳು ಸೂಚಿಸುತ್ತವೆ.
4. ಕೆಮ್ಮು ಮತ್ತು ಶೀತಕ್ಕೆ ಪರಿಹಾರ : ಅರಿಶಿನ ಹಾಲು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತ ಹೋಗಲಾಡಿಸುತ್ತದೆ. ಗಂಟಲು ನೋಯುತ್ತಿದ್ದರೆ ಅರಿಶಿನ ಹಾಲನ್ನು ಕುಡಿಯಿರಿ.
5. ಚರ್ಮಕ್ಕೆ ಹೊಳಪು ನೀಡುತ್ತದೆ : ಅರಿಶಿನದ ಹಾಲು ರೋಗನಿರೋಧಕ ಗುಣಗಳ ಜೊತೆ ಚರ್ಮದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮೊಡವೆ, ಚರ್ಮದ ಹೊಳಪು, ಕಲೆಗಳು ಇತ್ಯಾದಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೊಳೆಯುವ ಮತ್ತು ಸ್ಪಷ್ಟವಾದ ಚರ್ಮ ನೀಡುತ್ತದೆ ಮತ್ತು ಚರ್ಮದ ವಿನ್ಯಾಸ ಸುಧಾರಿಸುತ್ತದೆ.
6. ಕರುಳಿನ ಆರೋಗ್ಯ : ಅರಿಶಿನದಲ್ಲಿರುವ ಕರ್ಕ್ಯುಮಿನ್ ನಿಮ್ಮ ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅಜೀರ್ಣ, ಗ್ಯಾಸ್ಟ್ರಿಕ್, ಎದೆಯುರಿ ಇತ್ಯಾದಿಗಳನ್ನು ನಿವಾರಿಸಲು ಇದು ಸಹಾಯಕವಾಗಬಹುದು.
ಅರಿಶಿನ ಹಾಲನ್ನು ಸೇವಿಸುವುದರಿಂದ ಇತರ ಕೆಲವು ಪ್ರಯೋಜನಗಳೆಂದರೆ ರಕ್ತ ಶುದ್ಧೀಕರಣ, ಉತ್ತಮ ನಿದ್ರೆಗೆ ಸಹಾಯ ಮಾಡುವುದು, ಮನಸ್ಥಿತಿಯನ್ನು ಉನ್ನತೀಕರಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಿಕೊಳ್ಳುವುದು ಮತ್ತು ಮೂಳೆಯ ಆರೋಗ್ಯ ಸುಧಾರಿಸುವುದು.
ಅರಿಶಿನದ ಗುಣಲಕ್ಷಣಗಳು ಗಾಯದ ತ್ವರಿತ ಚೇತರಿಕೆಗೆ ಅಥವಾ ಅನಾರೋಗ್ಯದ ವಿರುದ್ಧ ಸಹಾಯ ಮಾಡುತ್ತದೆ. ಬೆಚ್ಚಗಿನ ಅರಿಶಿನ ಹಾಲಿನ ಸೇವನೆಯನ್ನು ಹೆಚ್ಚಾಗಿ ವೈದ್ಯರು ಶಿಫಾರಸು ಮಾಡುತ್ತಾರೆ ಮತ್ತು ಇದು ಅನೇಕ ಕಾಯಿಲೆಗಳಿಗೆ ಪರಿಹಾರವಾಗಿದೆ.
ಅರಿಶಿನ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಅರಿಶಿನದಲ್ಲಿನ ಕರ್ಕ್ಯುಮಿನ್ ಸೈಟೊಕಿನ್‌ಗಳ ಬಿಡುಗಡೆ ತಡೆಯುತ್ತದೆ. ಈ ಸೈಟೊಕಿನ್‌ಗಳು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿವೆ.
ಅರಿಶಿನ ಹಾಲು ತಯಾರಿಸುವುದು ಹೇಗೆ? : 1 ಟೀ ಚಮಚ ಅರಿಶಿನಕ್ಕೆ ½ ಕಪ್ ಹಾಲು, 1 ಟೀ ಚಮಚ ದಾಲ್ಚಿನ್ನಿ ಪುಡಿ, 1 ಟೀ ಚಮಚ ಶುಂಠಿ ಪುಡಿ, ಕಾಳುಮೆಣಸಿನಪುಡಿ ಚಿಟಿಕೆಯಷ್ಟು,1 ಟೀಸ್ಪೂನ್ ಜೇನುತುಪ್ಪ ಸೇರಿಸಿ.
ಬಳಿಕ ಒಂದು ಪಾತ್ರೆಯಲ್ಲಿ ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ ಕುದಿಸಿರಿ. ನಂತರ ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ. ಸೋಸಿ, ಇದಕ್ಕೆ ಚಿಟಿಕೆಯಷ್ಟು ದಾಲ್ಚಿನ್ನಿ ಸೇರಿಸಿ ಕುಡಿಯಿರಿ. ಮಲಗುವ ಮುನ್ನ ಈ ಹಾಲನ್ನು ಸೇವಿಸುವುದು ಒಳ್ಳೆಯದು.