ಚೆಂಗಲ್ಪಟ್ಟು, ತಮಿಳುನಾಡು: ತಮಿಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಮಶಾನದಲ್ಲಿ ಹೂಳಲಾಗಿದ್ದ ಬಾಲಕಿಯ ಶಿರಚ್ಛೇದ ಮಾಡಿ ಮಾಂತ್ರಿಕನೊಬ್ಬ ತೆಗೆದುಕೊಂಡು ಹೋಗಿರಬಹುದು ಎಂಬ ಅನುಮಾನಗಳು ಮೂಡಿವೆ.
ಪೊಲೀಸರ ವರದಿ ಪ್ರಕಾರ, ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಕಂ ತಾಲೂಕಿನ ಚಿತ್ತಿರವಾಡಿ ಗ್ರಾಮದ ಪಾಂಡಿಯನ್ ಅವರ ಪುತ್ರಿ ಕೃತಿಕಾ (12) ಆರನೇ ತರಗತಿಯಲ್ಲಿ ಓದುತ್ತಿದ್ದಳು. ಇದೇ ತಿಂಗಳ 5ರಂದು ಆವೂರಿಮೇಡು ಗ್ರಾಮದ ಅಜ್ಜಿ ಮನೆಗೆ ಹೋಗಿದ್ದಳು. ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಮುರಿದು ಬಾಲಕಿಯ ಮೇಲೆ ಬಿದ್ದಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು. 14 ರಂದು ಆಕೆಯ ಶವವನ್ನು ಸ್ಮಶಾನದಲ್ಲಿ ಹೂಳಲಾಯಿತು.
ಇದೇ ತಿಂಗಳ 25ರ ಅಮವಾಸ್ಯೆಯ ರಾತ್ರಿ ಸಮಾಧಿ ಸ್ಥಳದಲ್ಲಿ ಅತೀಂದ್ರಿಯ ಪೂಜೆ ನಡೆದ ಕುರುಹುಗಳು ಪತ್ತೆಯಾಗಿವೆ. ಬಾಲಕಿಯ ಶವವನ್ನು ದುಷ್ಕರ್ಮಿಗಳು ಶಿರಚ್ಛೇದನ ಮಾಡಿ ತೆಗೆದುಕೊಂಡು ಹೋಗಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹೂತಿದ್ದ ಶವವನ್ನು ಹೊರ ತೆಗೆದು ನೋಡಿದಾಗ ಮೃತ ಬಾಲಕಿಯ ಶಿರಚ್ಛೇದವಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಬಾಲಕಿ ಸಾವನ್ನಪ್ಪಿದ ಮರುದಿನ ಆಕೆಯ ಪೋಷಕರು ಪ್ರತಿಭಟನೆ ನಡೆಸಿದ್ದರು. ಘಟನೆ ನಡೆದ ದಿನ ವಿದ್ಯುತ್ ಕಂಬದ ಮೇಲೆ ವ್ಯಕ್ತಿಯೊಬ್ಬ ಹತ್ತಿದ್ದು, ಇದರಿಂದಾಗಿ ವಿದ್ಯುತ್ ಕಂಬ ನಮ್ಮ ಮಗಳ ಮೇಲೆ ಬಿದ್ದಿದೆ ಎಂದು ಪೋಷಕರು ಪೊಲೀಸ್ ಠಾಣೆ ಮುಂದು ಪ್ರತಿಭಟನೆ ನಡೆಸಿದ್ದರು. ಬಳಿಕ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ದೂರು ಸ್ವೀಕರಿಸಿದ ಚಿತ್ತಮೂರು ಪೊಲೀಸರು ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಯತ್ನಿಸಿದರು.
ಇದರಿಂದ ಕುಪಿತಗೊಂಡ ಆ ವ್ಯಕ್ತಿ ಪ್ರಕರಣವನ್ನು ಹಿಂಪಡೆಯುವಂತೆ ಮೃತ ಬಾಲಕಿಯ ಸಂಬಂಧಿಕರು ಹಾಗೂ ಕುಟುಂಬದವರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಇದರ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ತಲೆಯನ್ನು ಮಾಂತ್ರಿಕನು ಅತೀಂದ್ರಿಯ ಉದ್ದೇಶಕ್ಕಾಗಿ ತೆಗೆದುಕೊಂಡಿದ್ದಾನೆಯೇ? ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂಬುದನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ಮದ್ಯದ ಗಮ್ಮತ್ತು.. ನಶೆಯಲ್ಲಿ ವಿದ್ಯುತ್ ಕಂಬ ಏರಿದ ವ್ಯಕ್ತಿ - ಮುಂದೇನಾಯ್ತು ವಿಡಿಯೋ ನೋಡಿ