ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಗೆ ನಿಯೋಜಿಸಲಾಗಿದ್ದ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಅಶೋಕ್ ಕುಮಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಮೃತಪಟ್ಟ ಸ್ಥಳದಿಂದ ಗನ್ ಸಹ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ವಸಂತ ವಿಹಾರ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ವಸತಿ ಸಂಕೀರ್ಣದಲ್ಲಿ ಹೆಡ್ ಕಾನ್‌ಸ್ಟೆಬಲ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಹೆಡ್ ಕಾನ್ಸ್ಟೇಬಲ್ ಮನೆಯಲ್ಲಿ ಯಾವುದೋ ವಿಚಾರವಾಗಿ ಜಗಳವಾಡಿದ್ದರು ಎಂದು ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಕೆಲವು ಅಧಿಕಾರಿಗಳು ವಾಸಿಸುವ ವಸಂತ ವಿಹಾರ್‌ನಲ್ಲಿ ಈ ಘಟನೆ ನಡೆದಿರುವುದು ರಾಜಧಾನಿಯಲ್ಲಿ ಸಂಚಲನವನ್ನು ಉಂಟುಮಾಡಿದೆ. ಅದೇ ಕ್ಯಾಂಪಸ್‌ನಲ್ಲಿರುವ ಕೊಠಡಿಯಲ್ಲಿ ಕಾನ್ಸ್ಟೇಬಲ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಡಿಸೆಂಬರ್ 4 ರಂದು ಬೆಳಗ್ಗೆ ಅವರ ಕೊಠಡಿಯಿಂದ ಗುಂಡಿನ ಸದ್ದು ಕೇಳಿಬಂದಿತ್ತು. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ದೆಹಲಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ಅಶೋಕ್ ಅವರ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿತ್ತು. ದಿಲ್ಲಿ ಪೊಲೀಸ್ ತಂಡ ಕೂಡಲೇ ಗಾಜು ಒಡೆದು ಕೊಠಡಿಯ ಒಳಗೆ ತಲುಪಿದೆ. ಈ ವೇಳೆ ಹೆಡ್ ಕಾನ್ಸ್ಟೇಬಲ್ ಅಶೋಕ ಮೃತಪಟ್ಟಿರುವುದು ಕಂಡು ಬಂದಿದೆ. ಮೃತ ಅಶೋಕ್ ಹೆಡ್ ಕಾನ್ಸ್ಟೇಬಲ್ ಆಗಿ ದೆಹಲಿ ಪೊಲೀಸ್ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವಸಂತ ವಿಹಾರ್‌ನಲ್ಲಿ ವಾಸಿಸುವ ಇಸ್ರೇಲಿ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇಡೀ ಘಟನೆಯ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ತೋರುತ್ತಿದ್ದು, ಕೌಟುಂಬಿಕ ಕಾರಣದಿಂದ ಕಾನ್ಸ್ಟೇಬಲ್ ಅಶೋಕ್ ಮನನೊಂದಿದ್ದರು ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪೇದೆ ಆತ್ಮಹತ್ಯೆ ಮಾಡಿಕೊಂಡಿರಬಹದು ಎಂದು ದೆಹಲಿಯ ನೈರುತ್ಯ ಜಿಲ್ಲಾ ಡಿಸಿಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ದೆಹಲಿ ಪೊಲೀಸರು ಮತ್ತು ಇಸ್ರೇಲ್ ರಾಯಭಾರ ಕಚೇರಿಗೆ ಸಂಬಂಧಿಸಿದಂತೆ ಅಲ್ಲಿನ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದು, ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ಕೂಲಂಕಷ ತನಿಖೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆ ಬಳಿಕ ಕಾನ್ಸ್ಟೇಬಲ್ ಸಾವಿಗೆ ಸ್ಪಷ್ಟ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು, ಹಾಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ.
ಇದನ್ನೂ ಓದಿ:ಬೆಂಗಳೂರು ಯುವಕನ ಶವಕ್ಕಾಗಿ ಪೊಲೀಸರಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯ