ನವದೆಹಲಿ/ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವನ್ನು ಸ್ವಾಗತಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, "ಇದು ದೇಶದ ಮಹಿಳೆಯ ಹಿತದೃಷ್ಟಿಯಿಂದ ಕೈಗೊಂಡ ಸಮಯೋಚಿತ ನಿರ್ಧಾರ" ಎಂದರು. ಶುಕ್ರವಾರ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಕೆಲವೇ ಹೊತ್ತಲ್ಲಿ ನವದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. "ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ದೊರಕಿದ್ದು, ಇದು ಅವರ ಸಮಯ" ಎಂದು ಬಣ್ಣಿಸಿದರು.
"ನಾನು ಪ್ರಧಾನಿಯಾಗಿದ್ದಾಗ 1996ರಲ್ಲಿ ಈ ಮಸೂದೆಯನ್ನು ಮತ್ತೆ ತಂದಿದ್ದೆ. ಆದರೆ ಅಂಗೀಕಾರಗೊಳಿಸುವಲ್ಲಿ ವಿಫಲನಾಗಿದ್ದೆ. ನಂತರ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಈ ವಿಷಯದ ಎರಡು ಬಾರಿ ಪ್ರಸ್ತಾಪವಾಗಿತ್ತು. ಆದರೆ ಎರಡು ಬಾರಿಯೂ ಅವರ ಸರ್ಕಾರ ಈ ವಿಷಯದಲ್ಲಿ ಬಹುಮತ ಪಡೆಯಲಿಲ್ಲ. ಆದರೆ ನೀವು ಬಿಜೆಪಿ ಸರ್ಕಾರ ಅದೃಷ್ಟವಂತರು. ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದೆ" ಎಂದು ಹೇಳಿದರು.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ, ನಗುತ್ತಲೇ ಪ್ರತಿಕ್ರಿಯಿಸಲು ನಿರಾಕರಿಸಿದರು.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳೆಡರ ಮಧ್ಯೆ ವಿವಾದ ಸೃಷ್ಟಿಸಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡುತ್ತಾ, "ಈ ಬಗ್ಗೆ ನಾನು ಸದನದಲ್ಲೇ ಹೇಳಿದ್ದೇನೆ. ತಮಿಳುನಾಡು ಅಥವಾ ಕರ್ನಾಟಕಕ್ಕೆ ಸೇರದ ಐವರು ಸದಸ್ಯರನ್ನು ಕಳುಹಿಸಲಿ. ಅಲ್ಲಿ ಬಂದು ಪರಿಸ್ಥಿತಿ, ಬೆಳೆ ಸ್ಥಿತಿ, ಸಂಗ್ರಹಣೆಯ ಬಗ್ಗೆ ಅಧ್ಯಯನ ಮಾಡಲಿ" ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ: ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಉಭಯ ನಾಯಕರು ಇಂದು ಸಭೆ ನಡೆಸಲಿದ್ದಾರೆ. ನಿನ್ನೆ ನಿಗದಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸಭೆ ಇಂದು ನಿಗದಿಯಾಗಿದೆ. ಲೋಕಸಭಾ ವಿಶೇಷ ಅಧಿವೇಶನ ನಿನ್ನೆ ತಡವಾಗಿ ಮುಗಿದ ಹಿನ್ನೆಲೆಯಲ್ಲಿ ಇಂದು ಮೈತ್ರಿ ಮಾತುಕತೆ ನಡೆಯಲಿದ್ದು, ಸಂಜೆಯೊಳಗಾಗಿ ಜೆಡಿಎಸ್-ಬಿಜೆಪಿ ನಡುವಿನ ದೋಸ್ತಿ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿ, ಈ ವಿಷಯ ನನ್ನದಲ್ಲ. ಮೈತ್ರಿ ವಿಚಾರದಲ್ಲಿ ನಾನು ಏನು ಹೇಳುವುದಿಲ್ಲ. ಇವತ್ತಲ್ಲ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗಲೇ ಹೇಳಿದ್ದೇನೆ. ಇದರ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡುತ್ತಾರೆ ಎಂದು ಹೇಳಿದರು. ನಾನು ಅಮಿತ್ ಶಾ ಅವರನ್ನು ಭೇಟಿ ಮಾಡುವುದಿಲ್ಲ. ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತಾರೆ ಎಂದರು.
ಮಧ್ಯಾಹ್ನದ ಎರಡು ಗಂಟೆ ನಂತರ ದೆಹಲಿಯಲ್ಲಿ ಮೈತ್ರಿ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ. ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಿದ ನಂತರ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ನಿನ್ನೆ ರಾತ್ರಿ ಜೆಡಿಎಸ್ ನಾಯಕರದ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಸಾ.ರಾ. ಮಹೇಶ್ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ದೆಹಲಿ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಸಿ ಸೀಟು ಹಂಚಿಕೆ ಮೈತ್ರಿಯ ಸಾಧಕ -ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ. ಇದರ ಜೊತೆಗೆ ಬಿಜೆಪಿ ವರಿಷ್ಠರ ಜೊತೆ ಚರ್ಚಿಸಬೇಕಾದ ಅಂಶಗಳ ಬಗ್ಗೆಯೂ ಸಮಾಲೋಚನೆ ಮಾಡಿದ್ದಾರೆ ಎನ್ನಲಾಗಿದೆ.
ರಾತ್ರಿ ನಡೆದ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ.ರೇವಣ್ಣ , ಜೆಡಿಎಸ್ -ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವುದಾಗಿ ಬಿಜೆಪಿ ನಾಯಕರು ದೇವೇಗೌಡರ ಮುಂದೆ ಪ್ರಸ್ತಾಪವಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜೆಡಿಎಸ್ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದು, ಹಾಸನ ಮಂಡ್ಯ, ತುಮಕೂರು, ಕೋಲಾರ ಸೇರಿ ನಾಲ್ಕು ಕ್ಷೇತ್ರ ಸಿಕ್ಕಿದರೂ ಒಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಮೀಸಲಾತಿ ಮಸೂದೆ ಪಾಸ್: ಮಹಿಳಾ ಸಂಸದರಿಂದ ಪ್ರಧಾನಿ ಮೋದಿಗೆ ಜೈಕಾರ