ನವದೆಹಲಿ: ಮಾನಸಿಕ ಕ್ರೌರ್ಯ ಹಿನ್ನೆಲೆ ದಂಪತಿಗೆ ದೆಹಲಿ ಹೈಕೋರ್ಟ್ ವಿಚ್ಛೇದನ ನೀಡಿದೆ. ಪತ್ನಿಯನ್ನ ನಗದು ನೀಡುವ ಹಸುವಂತೆ ಪತಿ ನೋಡುತ್ತಿದ್ದ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪತ್ನಿ ಪೊಲೀಸ್ ಕೆಲಸ ಪಡೆದ ಬಳಿಕವಷ್ಟೇ ದಾಂಪತ್ಯದ ಕುರಿತು ಆಸಕ್ತಿ ಹೊಂದಿದ್ದ ಎಂದಿದೆ.
ಯಾವುದೇ ಭಾವನಾತ್ಮಕ ಸಂಬಂಧಗಳಿಲ್ಲದ ಪತಿಯ ಭೌತಿಕ ಮನೋಭಾವವು ಪತ್ನಿಗೆ ಮಾನಸಿಕ ಯಾತನೆ ಮತ್ತು ಆಘಾತವನ್ನು ಉಂಟುಮಾಡುತ್ತದೆ. ಅದು ಅವಳಿಗೆ ಕ್ರೌರ್ಯವನ್ನು ಉಂಟುಮಾಡಲು ಕಾರಣ ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ. ಸಾಮಾನ್ಯವಾಗಿ ವಿವಾಹಿತ ಮಹಿಳೆಯು ಸ್ವಂತ ಕುಟುಂಬವನ್ನು ಪ್ರಾರಂಭಿಸುವ ಬಯಕೆ ಹೊಂದಿರುತ್ತಾಳೆ ಆದರೆ, ಪ್ರಸ್ತುತ ಪ್ರಕರಣದಲ್ಲಿ ಪತಿಯು ದಾಂಪತ್ಯ ಮುಂದುವರೆಸುವ ಆಸಕ್ತಿ ತೋರದೆ ಕೇವಲ ಆಕೆಯ ಆದಾಯದ ಮೇಲೆ ಆಸಕ್ತಿ ಹೊಂದಿದ್ದಾನೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಒಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.
ಈ ಮೊದಲು ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಯ ಅರ್ಜಿಯನ್ನ ತಿರಸ್ಕರಿಸಲಾಗಿತ್ತು. ಆದರೆ, ದೆಹಲಿ ಹೈಕೋರ್ಟ್ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಕಕ್ಷಿದಾರರ ನಡುವಿನ ವಿವಾಹವನ್ನು ಅಸಿಂಧುಗೊಳಿಸಿದೆ. ಪತಿ ನಿರುದ್ಯೋಗಿ, ಮದ್ಯವ್ಯಸನಿಯಾಗಿದ್ದು, ತನಗೆ ದೈಹಿಕ ಹಿಂಸೆ ನೀಡಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಕಾರಣಕ್ಕೆ ವಿಚ್ಛೇದನಕ್ಕೆ ಮುಂದಾಗಿರುವುದಾಗಿ ಪತ್ನಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ. ಈ ಪ್ರಕರಣದಲ್ಲಿ ಪತಿ ಮತ್ತು ಪತ್ನಿಗೆ ಬಾಲ್ಯ ವಿವಾಹ ನಡೆದಿತ್ತು. ಪತಿಗೆ 19 ಹಾಗೂ ಪತ್ನಿಗೆ 13 ವರ್ಷವಿರುವಾಗಲೇ 2005ರಲ್ಲಿ ವಿವಾಹ ಮಾಡಲಾಗಿತ್ತು. ಆದರೆ 2014ರ ವರೆಗೂ ಅಂದರೆ ಇಬ್ಬರು ಪ್ರಾಪ್ತ ವಯಸ್ಸಿಗೆ ಬರುವರೆಗೂ ಸಂಸಾರ ನಡೆಸಿರಲಿಲ್ಲ. ಬಳಿಕ ಆಕೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ.
ಇದಕ್ಕೂ ಮೊದಲು ಆಕೆಯ ಶಿಕ್ಷಣಕ್ಕೆ ಪತಿ ಧನಸಹಾಯ ಮಾಡಿದ್ದಾನೆ ಎಂಬ ಕಾರಣದಿಂದಾಗಿ ಕೌಂಟುಬಿಕ ಕೋರ್ಟ್ನಲ್ಲಿ ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡಿತ್ತು. ಜೀವನ ಮತ್ತು ಶಿಕ್ಷಣಕ್ಕೆ ಆಕೆಯ ಪೋಷಕರೇ ಎಲ್ಲಾ ವೆಚ್ಚ ಭರಿಸಿದ್ದರು ಎಂಬುದು ಸ್ಪಷ್ಟವಾದ ಬಳಿಕ ದೆಹಲಿ ಹೈಕೋರ್ಟ್ ದಂಪತಿಗೆ ವಿಚ್ಛೇದನ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಓದಿ: ಒಡಿಶಾ: ಗ್ರಾಮದ ಮೇಲೆ 20ಕ್ಕೂ ಹೆಚ್ಚು ಬಾಂಬ್ ದಾಳಿ, 30 ಮನೆಗಳಿಗೆ ಹಾನಿ