ನವದೆಹಲಿ: ಈ ವರ್ಷದ ಆರಂಭದಲ್ಲಿ ನಡೆಸಿದ ಪ್ರಿಲಿಮಿನರಿ ಸಿವಿಲ್ ಸರ್ವಿಸಸ್ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸುವಂತೆ ಕೋರಿ ಯುಪಿಎಸ್ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯ ನಪಾಸಾದ 17 ಆಕಾಂಕ್ಷಿಗಳು ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಲು ದೆಹಲಿ ಹೈಕೋರ್ಟ್ ಬುಧವಾರ ಒಪ್ಪಿಕೊಂಡಿದೆ. ಹೈಕೋರ್ಟ್ ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ಯುಪಿಎಸ್ಸಿಯ ವಾದವನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ತಳ್ಳಿಹಾಕಿದರು. ಇದು ಅಭ್ಯರ್ಥಿಗಳ ಕಾನೂನು ಮತ್ತು ಮೂಲ ಹಕ್ಕುಗಳ ಪರಿಶೀಲನೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
ಅಂತಿಮ ಫಲಿತಾಂಶಗಳನ್ನು ಘೋಷಿಸಿದ ನಂತರವೇ ಉತ್ತರ ಕೀಯನ್ನು ಪ್ರಕಟಿಸಲಾಗುವುದು ಎಂದು ಯುಪಿಎಸ್ಸಿ ಜೂನ್ನಲ್ಲಿ ಹೊರಡಿಸಿದ ಪ್ರಕಟಣೆಯನ್ನು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಕ್ಕೆ ಬೇಕಾದಷ್ಟು ಅಂಕಗಳನ್ನು ಗಳಿಸದ ಅರ್ಜಿದಾರರು ಪ್ರಶ್ನಿಸಿದ್ದಾರೆ.
"ಮೇಲ್ನೋಟಕ್ಕೆ ಅರ್ಜಿದಾರರ ವಾದವು ನ್ಯಾಯೋಚಿತವಾಗಿದೆ ಮತ್ತು ಅಭ್ಯರ್ಥಿಗಳ ಮೂಲ ಹಕ್ಕುಗಳ ವಿಚಾರವನ್ನು ಒಳಗೊಂಡಿದೆ ಎಂಬುದು ಕಂಡು ಬರುತ್ತಿದೆ. ಆದ್ದರಿಂದ ಈ ನ್ಯಾಯಾಲಯವು ಆಡಳಿತಾತ್ಮಕ ಕಾನೂನು ಮತ್ತು ಸಾಂವಿಧಾನಿಕ ನಿಬಂಧನೆಗಳ ಕ್ಷೇತ್ರವನ್ನು ಪರಿಶೀಲಿಸುವ ಮೂಲಕ ಅದನ್ನು ಪರೀಕ್ಷಿಸಬೇಕಾಗುತ್ತದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
"ಮೂಲಭೂತ ಹಕ್ಕುಗಳು ಅಥವಾ ವ್ಯಕ್ತಿಯ ಯಾವುದೇ ಹಕ್ಕುಗಳ ಜಾರಿ ಮತ್ತು ರಕ್ಷಣೆಯನ್ನು ಕೋರಿದಾಗ, ಈ ನ್ಯಾಯಾಲಯವು ಅದನ್ನು ಪರಿಗಣಿಸದೇ ಇರಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿಯನ್ನು ಸ್ವೀಕರಿಸಲಾಗಿದೆ. 2023 ರ ಸೆಪ್ಟೆಂಬರ್ 26 ರಂದು ಅರ್ಹತೆಯ ಆಧಾರದ ಮೇಲೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು" ಎಂದು ನ್ಯಾಯಾಲಯ ಹೇಳಿದೆ. ಈ ಹಿಂದೆ, ಯುಪಿಎಸ್ಸಿ ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಅಧಿಕಾರ ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಮಾತ್ರ ಇದೆ ಎಂದು ವಾದಿಸಿ ಯುಪಿಎಸ್ಸಿ ಅರ್ಜಿಯ ಸಿಂಧುತ್ವವನ್ನು ಪ್ರಶ್ನಿಸಿತ್ತು.
ಈ ವಿಷಯದ ಬಗ್ಗೆ ಈ ಹಿಂದೆ ತನ್ನ ಆದೇಶವನ್ನು ತಡೆಹಿಡಿದಿದ್ದ ನ್ಯಾಯಾಲಯವು, ಕೀ ಉತ್ತರಗಳನ್ನು ಬಿಡುಗಡೆ ಮಾಡುವಂತೆ ಯುಪಿಎಸ್ಸಿಯನ್ನು ಒತ್ತಾಯಿಸುವುದು ನಾಗರಿಕ ಸೇವಾ "ನೇಮಕಾತಿ" ವರ್ಗಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿದೆ. ಹೀಗಾಗಿ ತಾನು ಇದನ್ನು ಕೇಂದ್ರ ಆಡಳಿತ ನ್ಯಾಯಮಂಡಳಿಯ ವಿಶೇಷ ಅಧಿಕಾರ ವ್ಯಾಪ್ತಿಗೆ ಸೇರಿಸುವುದಿಲ್ಲ ಎಂದು ಹೈ ಕೋರ್ಟ್ ಹೇಳಿದೆ.
ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಬಳಸಲಾಗುವ ಕೀ ಉತ್ತರಗಳನ್ನು ಕೇಳುವುದು ನೇಮಕಾತಿ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಾಗುವುದಿಲ್ಲ ಎಂದು ನ್ಯಾಯಮೂರ್ತಿ ಸಿಂಗ್ ಹೇಳಿದರು. ಪ್ರಿಲಿಮ್ಸ್ ಪರೀಕ್ಷೆಯು ಸ್ವತಂತ್ರ, ಅರ್ಹತಾ ಪರೀಕ್ಷೆಯಾಗಿದೆ ಮತ್ತು ಈ ಪ್ರಕರಣದಲ್ಲಿ, ಅರ್ಜಿದಾರರು ತಮ್ಮ ಅನರ್ಹತೆಯನ್ನು ಪ್ರಶ್ನಿಸುತ್ತಿಲ್ಲ ಅಥವಾ ಪರೀಕ್ಷಾ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಇಡೀ ಪ್ರಕ್ರಿಯೆ ಮುಗಿಯುವ ಮೊದಲೇ ಕೀ ಉತ್ತರಗಳನ್ನು ಪ್ರಕಟಿಸುವಂತೆ ಅವರು ಕೋರಿದ್ದಾರೆ. ಪ್ರಸ್ತುತ ಅರ್ಜಿಯನ್ನು ಪರಿಗಣಿಸಲು ಯಾವುದೇ ಅಡೆತಡೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನ್ಯಾಯಾಂಗ ಬಂಧನ ಸೆ.26ರವರೆಗೆ ವಿಸ್ತರಣೆ