ಚಂಡೀಗಢ(ಹರಿಯಾಣ): ಪ್ರಸಕ್ತ ವರ್ಷ ನಡೆಯುವ ಟೊಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುವಿಗೆ 6 ಕೋಟಿ. ರೂ ಬಹುಮಾನ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಣೆ ಮಾಡಿದೆ. ಜತೆಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್, ಮುಂಬರುವ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಉಳಿದಂತೆ ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 2.5 ಕೋಟಿ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಮುದ್ರದಲ್ಲಿ ಸಿಕ್ಕ ಸಣ್ಣದೊಂದು ಮೀನು... 2.60 ಲಕ್ಷ ರೂ.ಗೆ ಹರಾಜು
ಅಂತಾರಾಷ್ಟ್ರೀಯ ಒಲಿಂಪಿಕ್ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಸೇರಿ ಒಲಿಂಪಿಕ್ ಪದಕ ವಿಜೇತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಸಂದೀಪ್ ಸಿಂಗ್ ಈ ವಿಷಯ ಪ್ರಕಟಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ರಾಜ್ಯದ 30 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ತಯಾರಿಗೋಸ್ಕರ ನೀಡಲಾಗಿದೆ ಎಂದಿರುವ ಅವರು, ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ವಿಜೇತರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ ಕ್ರೀಡೆ ಉತ್ತೇಜಿಸಲು ಸರ್ಕಾರ ಹೊಸ ನೀತಿ ರೂಪಿಸಿದ್ದು, ಇದರಲ್ಲಿ ಶೇ. 3ರಷ್ಟು ಮೀಸಲಾತಿ ಇಡಲಾಗಿದೆ ಎಂದರು.