ಸೋನಿಪತ್(ಹರಿಯಾಣ): ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರೊಂದಿಗೆ ವಾಗ್ವಾದ ನಡೆದು ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ ಸಾವನ್ನಪ್ಪಿದ್ದಾರೆ. ಇದರಿಂದ ನೊಂದ ಮಗ ಕೂಡಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಸೋನಿಪತ್ನಲ್ಲಿ ನಡೆದಿದೆ. ತಂದೆಯ ಅಂತ್ಯಕ್ರಿಯೆ ನಡೆಸಿರುವ ಸ್ಥಳದಲ್ಲೇ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ಈ ಘಟನೆ ನಡೆಯಿತು. ಸಾವಿಗೆ ಶರಣಾಗಿರುವ ಯುವಕನನ್ನು ಸಂದೀಪ್ ಎಂದು ಗುರುತಿಸಲಾಗಿದೆ.
ಸುದ್ದಿಯ ವಿವರ: ಸಂದೀಪ್ನ ತಂದೆ ಜಗ್ಬೀರ್ ಬಸ್ ಚಾಲಕರಾಗಿ ದೆಹಲಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಬಸ್ ಚಲಾಯಿಸುತ್ತಾ ದೆಹಲಿ ಡಿಪೋಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎಸ್ಯುವಿಯಲ್ಲಿ(ಕಾರು) ತೆರಳುತ್ತಿದ್ದ ಯುವಕರೊಂದಿಗೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಯುವಕರು ಬಸ್ ಚಾಲಕ ಜಗ್ಬೀರ್‌ರನ್ನು ಕೊಲೆ ಮಾಡುವ ಉದ್ದೇಶದಿಂದ ಮತ್ತೆ ಹಿಂಬಾಲಿಸಿದ್ದಾರೆ.
ಇದನ್ನೂ ಓದಿ: ಡೇಂಜರಸ್ ಡ್ರೈವರ್.. ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಬಸ್ ಓಡಿಸಿದ ಚಾಲಕ.. ವಿಡಿಯೋ ನೋಡಿ
ಬಸ್ ಕುಂಡ್ಲಿ ಪೊಲೀಸ್ ಠಾಣೆ ತಲುಪುತ್ತಿದ್ದಂತೆ ಜಗ್ಬೀರ್ ಹಾಗೂ ಆತನ ಸಹೋದ್ಯೋಗಿ ಫತೇಹ್ ಸಿಂಗ್ ಜೊತೆ ಆರೋಪಿಗಳು ವಾಗ್ವಾದಕ್ಕಿಳಿದರು. ಮಾರಣಾಂತಿಕವಾಗಿ ಹಲ್ಲೆಯನ್ನೂ ನಡೆಸಿದರು. ಪರಿಣಾಮ, ಜಗ್ಬೀರ್ ಹಾಗೂ ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ತಡರಾತ್ರಿ ಜಗ್ಬೀರ್ ನಿಧನರಾಗಿದ್ದಾರೆ.
ತಂದೆಯ ಸಾವಿನಿಂದ ತೀವ್ರವಾಗಿ ಬೇಸರಗೊಂಡ ಸಂದೀಪ್ ತನ್ನ ತಂದೆಯ ಅಂತ್ಯಕ್ರಿಯೆ ನಡೆಸಿರುವ ಜಾಗದಲ್ಲಿಯೇ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣದ ಆರೋಪಿಗಳನ್ನು ಇಲ್ಲಿಯವರೆಗೂ ಬಂಧಿಸಿದ ಪೊಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.